ಬೆಂಗಳೂರು: ಆಭರಣ ಪ್ರದರ್ಶನ ಮೇಳಗಳಲ್ಲಿ ಗ್ರಾಹಕಳ ಸೋಗಿನಲ್ಲಿ ಕಳವು ಮಾಡುತ್ತಿದ್ದ ನಿವೃತ್ತ ಉಪನ್ಯಾಸಕಿಯನ್ನು ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಉದಯಗಿರಿಯ ನಿವೃತ್ತ ಉಪನ್ಯಾಸಕಿ, ಜಹೀರಾ ಫಾತಿಮಾ (64) ಬಂಧಿತ ಆರೋಪಿ. ಆಕೆಯಿಂದ ಒಟ್ಟು 8 ಲಕ್ಷ ರೂ. ಮೌಲ್ಯದ 78 ಗ್ರಾಂ ಚಿನ್ನಾಭರಣ ಮತ್ತು 12 ಗ್ರಾಂನ ಒಂದು ಡೈಮಂಡ್ ಬ್ರೇಸ್‌ಲೇಟ್ ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸುಬ್ರಹ್ಮಣ್ಯ ನಗರ ಠಾಣೆ ವ್ಯಾಪ್ತಿಯ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಫೈವ್ ಸ್ಟಾರ್ ಹೋಟೆಲ್‌ವೊಂದರಲ್ಲಿ ಜನವರಿ 17ರಿಂದ 19ರವರೆಗೂ ಚಿನ್ನಾಭರಣಗಳ ಮೇಳ ಆಯೋಜಿಸಲಾಗಿತ್ತು. ಆಭರಣ ಮೇಳದಲ್ಲಿ ಮಳಿಗೆಯೊಂದಕ್ಕೆ ಜನವರಿ 18ರಂದು ಸಂಜೆ ಗ್ರಾಹಕಿಯ ಸೋಗಿನಲ್ಲಿ ಬಂದಿದ್ದ ಆರೋಪಿ, 11.950 ಗ್ರಾಂನ ಡೈಮಂಡ್ ಬ್ರೇಸ್‌ಲೇಟ್ ಹಾಗೂ 59.100 ಗ್ರಾಂನ ಚಿನ್ನದ ಬಳೆಯನ್ನ ಕದ್ದು ಪರಾರಿಯಾಗಿದ್ದಳು.
ಮಳಿಗೆ ತೆರದಿದ್ದ ಜ್ಯೂವೆಲರ್ಸ್ ಅಂಗಡಿಯ ಮ್ಯಾನೇಜರ್ ಸುಬ್ರಮಣ್ಯ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ಕೈಗೊಂಡ ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು, ಮತ್ತೊಂದು ಹೋಟೆಲ್‌ನಲ್ಲಿ ನಡೆಯುತ್ತಿದ್ದ ಚಿನ್ನಾಭರಣ ಪ್ರದರ್ಶನಕ್ಕೆ ಮಾರ್ಚ್ 2ರಂದು ಗ್ರಾಹಕಿಯ ಸೋಗಿನಲ್ಲಿ ಬಂದಿದ್ದ ಆರೋಪಿಯನ್ನ ಬಂಧಿಸಿದ್ದಾರೆ.
ಆರೋಪಿಯು ಮೈಸೂರಿನಲ್ಲಿರುವ ಆಕೆಯ ವಾಸದ ಮನೆಯಲ್ಲಿಟ್ಟಿದ್ದ ಹಾಗೂ ಜ್ಯೂವೆಲರಿ ಅಂಗಡಿಗಳಿಗೆ ಮಾರಾಟ ಮಾಡಿದ್ದ ಆಭರಣಗಳ ಸಹಿತ ಒಟ್ಟು 78 ಗ್ರಾಂ ಚಿನ್ನಾಭರಣ ಮತ್ತು 12 ಗ್ರಾಂನ ಡೈಮಂಡ್ ಬ್ರೇಸ್‌ಲೇಟ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.