ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಹೃದಯಾಘಾತದಿಂದ ಕೇರಳದ ಎರ್ನಾಕುಲಂ ಜಿಲ್ಲೆಯ ಕೂಥಾಟುಕುಳಂನಲ್ಲಿ ಇಂದು ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಆಯುರ್ವೇದ ಚಿಕಿತ್ಸೆ ಪಡೆಯಲು ಕೇರಳಕ್ಕೆ ಆಗಮಿಸಿದ್ದ ಒಡಿಂಗಾ ಬೆಳಗ್ಗೆ ವಾಕಿಂಗ್ ಮಾಡುವ ವೇಳೆ ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ.
ವಾಕಿಂಗ್ ವೇಳೆ ಕುಸಿದು ಬಿದ್ದ ಅವರನ್ನು ತಕ್ಷಣವೇ ಶ್ರೀಧರಿಯಂ ಆಯುರ್ವೇದ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಕರೆತರಲಾಯಿತು. ಆದರೆ, 9.52ರ ವೇಳೆಗೆ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ವಕ್ತಾರರು ಮಾಹಿತಿ ನೀಡಿದ್ದಾರೆ.
ಕಳೆದ ಆರು ದಿನಗಳ ಹಿಂದೆ ಒಡಿಂಗಾ ಮಗಳು ರೋಸ್ಮೆರಿ ಮತ್ತು ಕುಟುಂಬದ ಆತ್ಮೀಯ ಸದಸ್ಯರೊಂದಿಗೆ ಕೂಥಾಟುಕುಳಂಗೆ ಆಗಮಿಸಿದ್ದರು. ಒಡಿಂಗಾ ಮಗಳು ಈ ಹಿಂದೆ ಇದೇ ಆಸ್ಪತ್ರೆಯಲ್ಲಿ ಪಡೆದ ಚಿಕಿತ್ಸೆಯಿಂದ ತಮ್ಮ ಕಣ್ಣಿನ ದೃಷ್ಟಿಯನ್ನು ಮರಳಿ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಒಡಿಂಗಾ ಕುಟುಂಬ ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸಿತ್ತು ಎಂದು ಮೂಲಗಳಿಂದ ತಿಳಿದು ಬಂದಿದೆ.
ಒಡಿಂಗಾ ಅವರ ಮೃತದೇಹವನ್ನು ಕೂಥಾಟುಕುಳಂನಲ್ಲಿನ ದೇವ ಮಾತಾ ಆಸ್ಪತ್ರೆಯಲ್ಲಿ ಇಡಲಾಗಿದೆ. ವಿದೇಶಿ ಪ್ರಾದೇಶಿಕಾ ನೋಂದಣಿ ಕಚೇರಿಯ ಅಧಿಕಾರಿಗಳು ಶಿಷ್ಟಾಚಾರದ ಅನುಸಾರ ಸ್ಥಳೀಯ ಪೊಲೀಸರು ಮತ್ತು ಇತರೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಂತಾಪ: ಒಡಿಂಗಾ ಅವರ ಹಠಾತ್ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. “ನನ್ನ ಆತ್ಮೀಯ ಗೆಳೆಯ ಮತ್ತು ಕೀನ್ಯಾದ ಮಾಜಿ ಪ್ರಧಾನಿ ಶ್ರೀ ರೈಲಾ ಒಡಿಂಗಾ ಅವರ ನಿಧನ ತೀವ್ರ ದುಃಖವಾಗಿದೆ. ಅವರು ಓರ್ವ ಉನ್ನತ ರಾಜನೀತಿಜ್ಞ ಮತ್ತು ಭಾರತದ ಪ್ರೀತಿಯ ಸ್ನೇಹಿತ” ಎಂದು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.