ಸಾಲದ ಬವಣೆಯಿಂದ ಕಂಗೆಟ್ಟ ದಾವಣೆಗೆರೆಯ 43ನೇ ವಾರ್ಡ್‌ನ ಬಿಜೆಪಿ ಮಾಜಿ ಕಾರ್ಪೋರೇಟರ್ ಸಂಕೋಳ್ ಚಂದ್ರಶೇಖರ ಕಾರಿಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿ ಅದರಲ್ಲೇ ಕುಳಿತುಕೊಂಡು ಸಜೀವ ದಹನವಾಗಿ ಹೋಗಿರುವ ದಾರುಣ ಘಟನೆ ನಡೆದಿದೆ.
ಅವರ ಶವ ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಂಕೋಳ್ ಚಂದ್ರಶೇಖರ ಅವರ ಈ ದಾರುಣ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಇಬ್ಬರು ಮಕ್ಕಳು ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ದ್ದಾರೆ, ಅವರ ಆರೋಗ್ಯ ಸ್ಥಿತಿ ಕೂಡ ಗಂಭೀರವಾಗಿದೆ.
ಸಾಲದ ವಿಚಾರದಲ್ಲಿ ಮನೆಯಲ್ಲಿ ನಡೆದ ಜಗಳೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಸಂಕೋಳ್ ಚಂದ್ರಶೇಖರ ಸಾಲ ಮಾಡಿಕೊಂಡಿದ್ದರು. ಸಾಲ ಹೊರೆ ಹೆಚ್ಚಾಗುುತ್ತಿದ್ದ ಕಾರಣ ಮನೆಗೆ ಸಾಲಗಾರರು ಬರಲಾರಂಭಿಸಿದ್ದರು. ಅವರ ಇಬ್ಬರು ಮಕ್ಕಳಾದ 20 ವರ್ಷದ ನರೇಶ ಹಾಗೂ 23 ವರ್ಷದ ಪವಿತ್ರಾಗೆ ಕಿರಿಕಿರಿಯಾಗುತ್ತಿತ್ತು. ಎಲ್ಲೇ ಹೋದರೂ ಸಾಲದ ವಿಚಾರವಾಗಿ ಜನರು ಪ್ರಶ್ನೆ ಮಾಡುತ್ತಿದ್ದರು. ಹೀಗಾಗಿ ಮಕ್ಕಳು ಶನಿವಾರ ಚಂದ್ರಶೇಖರ ಮನೆಗೆ ಆಗಮಿಸುತ್ತಿದ್ದಂತೆ ತರಾಟೆಗೆ ತೆಗೆದುಕೊಂಡಿದ್ದರು. ಇದು ಮುಂದವರಿದರೆ ನಾವು ಸಾಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಈ ಮಾತು ಚಂದ್ರಶೇಖರ ಅವರನ್ನು ತೀವ್ರ ಘಾಸಿಗೊಳಿಸಿತ್ತು ಎನ್ನಲಾಗಿದೆ.
ಚಂದ್ರಶೇಖರ ಮನೆಯಲ್ಲಿ ಜಗಳವಾಡಿ ಕಾರಿನಲ್ಲಿ ದಾವಣಗೆರೆ ಹೊರವಲಯ ನಾಗನೂರು ರಸ್ತೆಯ ಬಳಿ ಇರುವ ಅಡಿಕೆ ತೋಟಕ್ಕೆ ತೆರಳಿ ಕಾರು ನಿಲ್ಲಿಸಿ ಪೆಟ್ರೋಲ್ ಸುರಿದು ಕಾರಿನ ಒಳಗೆ ಡೋರ್ ಲಾಕ್ ಮಾಡಿಕೊಂಡು ಬೆಂಕಿ ಹಚ್ಚಿದ್ದಾರೆ. ಆ ಬೆಂಕಿಯಲ್ಲಿ ಚಂದ್ರಶೇಖರ ಸುಟ್ಟು ಬೂದಿಯಾಗಿದ್ದಾರೆ. ಇತ್ತ ತಂದೆ ಮನೆಗೆ ಬರಲಿಲ್ಲ, ಫೋನ್ ಕೂಡ ರಿಸೀವ್ ಮಾಡಿಲ್ಲ ಎಂದು ಮಕ್ಕಳು
ಆತಂಕಗೊಂಡಿದ್ದರು. ಬಳಿಕ ತಂದೆ ಈ ರೀತಿಯಾಗಿ ಪ್ರಾಣ ಕಳೆದುಕೊಂಡಿದ್ದಾರೆಂಬ ವಿಷಯ ತಿಳಿಯುತ್ತಿದ್ದಂತೆ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡಿರುವ ಮಕ್ಕಳನ್ನು ದಾವಣೆಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.


