Menu

ದೇಶದಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಸೈಬರ್ ಕಮಾಂಡ್ ಕೇಂದ್ರ ಸ್ಥಾಪನೆ

ಬೆಂಗಳೂರು:ದಿನೇ ದಿನೇ ಹೆಚ್ಚುತ್ತಿರುವ ಸೈಬರ್‌ ಅಪರಾಧಗಳಿಗೆ ಪರಿಣಾಮಕಾರಿಯಾಗಿ ಕಡಿವಾಣ ಹಾಕಲು ರಾಜ್ಯ ಸರಕಾರವು ದೇಶದಲ್ಲೇ ಮೊದಲ ಬಾರಿಗೆ ಸೈಬರ್ ಕಮಾಂಡ್ ಕೇಂದ್ರವನ್ನು ರಾಜ್ಯದಲ್ಲಿ ಆರಂಭಿಸಿದೆ.

ನೂತನ ಸೈಬರ್ ಕಮಾಂಡ್ ಸೆಂಟರ್‌ ಗೆ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಶ್ರೇಣಿಯ ಐಪಿಎಸ್ ಅಧಿಕಾರಿ ಮುಖ್ಯಸ್ಥರಾಗಲಿದ್ದು,ವಿಭಾಗ ಮಟ್ಟದಲ್ಲಿ ಎಸ್ ಪಿಗಳು ಸೈಬರ್ ಅಪರಾಧಗಳ ತಡೆ ಹಾಗೂ ಪತ್ತೆಯ ನೇತೃತ್ವವಹಿಸಲಿದ್ದಾರೆ.
ನೂತನ ಸೈಬರ್ ಕಮಾಂಡ್‌ ಕೇಂದ್ರದ ಡಿಜಿಪಿಯಾಗಿ 1994 ಬ್ಯಾಚ್‌ನ ಹಿರಿಯ ಐಪಿಎಸ್ ಅಧಿಕಾರಿ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ)ದ ಡಿಜಿಪಿ ಪ್ರಣವ್‌ ಮೊಹಾಂತಿ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.

ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಆನ್‌ಲೈನ್ ಅಪರಾಧಗಳು, ಸೆಕ್ಸ್‌ಟಾರ್ಷನ್, ಡಿಜಿಟಲ್ ಬಂಧನ, ಡೀಪ್‌ಫೇಕ್‌ಗಳು, ಗುರುತಿನ ಕಳ್ಳತನ, ಹ್ಯಾಕಿಂಗ್, ಡೇಟಾ ಉಲ್ಲಂಘನೆ, ಔಟ್ರೀಚ್, ತಪ್ಪು ಮಾಹಿತಿ, ಸೈಬರ್ ಭದ್ರತೆ, ಸೈಬರ್ ಅಪರಾಧ, ರಾನ್ಸಮ್‌ವೇರ್, ಸ್ಟಾಕಿಂಗ್‌ ಸೇರಿದಂತೆ ಸೈಬರ್ ವಂಚನೆಗಳನ್ನು ಕೇಂದ್ರ ಪರಿಶೀಲಿಸಲಿದೆ.

43 ಸಿಇಎನ್‌ ಠಾಣೆ:

ಈ ಹಿಂದೆ ಸೈಬರ್‌ ಅಪರಾಧ ಮತ್ತು ಮಾದಕ ದ್ರವ್ಯ ವಿಭಾಗವು ಅಪರಾಧ ತನಿಖಾ ವಿಭಾಗದ (ಸಿಐಡಿ) ಭಾಗವಾಗಿತ್ತು. ಇದೀಗ ಪ್ರತ್ಯೇಕ ವಿಭಾಗವಾಗಿ ಕಾರ್ಯಾಚರಿಸಲಿದ್ದು, ಲಭ್ಯವಿರುವ ಮೂಲಸೌಕರ್ಯ ಮತ್ತು ಮಾನವಶಕ್ತಿಯನ್ನು ಬಳಸಿಕೊಂಡು ಸೈಬರ್ ಕಮಾಂಡ್ ಕಾರ್ಯನಿರ್ವಹಿಸಲಿದೆ.

ಈಗಾಗಲೇ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಅಸ್ತಿತ್ವದಲ್ಲಿರುವ 43 ಸಿಇಎನ್ (ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ) ಪೊಲೀಸ್ ಠಾಣೆಗಳನ್ನು ಇದು ಒಳಗೊಂಡಿರಲಿದೆ. ಇವುಗಳನ್ನು ಸೈಬರ್ ಅಪರಾಧ ಪೊಲೀಸ್ ಠಾಣೆಗಳಾಗಿ ಮರುನಾಮಕರಣ ಮಾಡಲಾಗುತ್ತದೆ.

ನಗರ ಘಟಕವು ಕೇಂದ್ರಕ್ಕೆ:

ಇದಲ್ಲದೆ, ಡಿಜಿಪಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈಬರ್ ಅಪರಾಧ ಪೊಲೀಸ್ ಠಾಣೆಗಳು, ರಾಜ್ಯ ಮಟ್ಟದ ಅಧಿಕಾರ ವ್ಯಾಪ್ತಿಯೊಂದಿಗೆ ಸಿಐಡಿ, ಹಾಗೆಯೇ ನಗರ ಪೊಲೀಸ್ ಕಮಿಷನರೇಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈಬರ್ ಕಮಾಂಡ್ ಘಟಕವನ್ನು ಸಹ ಈ ಸೈಬರ್ ಕಮಾಂಡ್ ಸೆಂಟರ್‌ನ ವ್ಯಾಪ್ತಿಗೆ ತರಲಾಗುತ್ತದೆ.

ಹೀಗೆ ಒಟ್ಟು 45 ಪೊಲೀಸ್ ಠಾಣೆಗಳನ್ನು ಈ ವಿಶೇಷ ಘಟಕದ ವ್ಯಾಪ್ತಿಗೆ ತರಲಾಗುತ್ತದೆ. ಪ್ರಸ್ತುತ ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ದಾಖಲಾಗಿರುವ ಒಟ್ಟು ಅಪರಾಧ ಪ್ರಕರಣಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳ ಪ್ರಮಾಣವೇ ಸರಿಸುಮಾರು ಶೇ. 20ರಷ್ಟಿದೆ.

2017ರಲ್ಲಿ ಅಸ್ತಿತ್ವಕ್ಕೆ:
ಇವುಗಳ ನಿರ್ವಹಣೆಗೆ ಈ ಸೈಬರ್‌ ಕಮಾಂಡ್‌ ಸೆಂಟರ್‌ನಿಂದ ಅನುಕೂಲವಾಗಲಿದೆ.2001ರಲ್ಲೇ ಸೈಬರ್‌ ಠಾಣೆ ಸ್ಥಾಪಿಸಿತ್ತು ಕರ್ನಾಟಕಇದಷ್ಟೇ ಅಲ್ಲ 2001ರಲ್ಲಿ ಭಾರತದ ಮೊದಲ ಸೈಬರ್ ಅಪರಾಧ ಪೊಲೀಸ್ ಠಾಣೆಯನ್ನು ಕರ್ನಾಟಕವೇ ಸ್ಥಾಪಿಸಿತ್ತು. ಹೆಚ್ಚುತ್ತಿದ್ದ ಸೈಬರ್ ಅಪರಾಧಗಳನ್ನು ನಿಭಾಯಿಸಲೆಂದೇ ಬೆಂಗಳೂರಿನ ಸಿಐಡಿಯಲ್ಲಿ ಇದನ್ನು ಪ್ರಾರಂಭಿಸಲಾಗಿತ್ತು.

ಬೆಂಗಳೂರಿನ ಸೈಬರ್ ಅಪರಾಧ ಪೊಲೀಸ್ ಠಾಣೆ ಮಾರ್ಚ್ 2017ರಲ್ಲಿ ಅಸ್ತಿತ್ವಕ್ಕೆ ಬಂತು. ಕಳೆದ ವರ್ಷ ಗೃಹ ಸಚಿವ ಜಿ. ಪರಮೇಶ್ವರ ಅವರು ರಾಜ್ಯದಲ್ಲಿ ಸೈಬರ್ ಕಮಾಂಡ್ ಅನ್ನು ಸ್ಥಾಪಿಸುವ ಚಿಂತನೆ ಇದೆ ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ ಇದೀಗ ಸೈಬರ್ ಕಮಾಂಡ್‌ ಸೆಂಟರ್‌ ಅಸ್ತಿತ್ವಕ್ಕೆ ಬಂದಿದೆ.

50 ಸಾವಿರ ಸೈಬರ್‌ ಕೇಸ್‌:

ಕಳೆದ ನಾಲ್ಕು ವರ್ಷಗಳಲ್ಲಿ ಕರ್ನಾಟಕದಲ್ಲಿ ಸುಮಾರು 52 ಸಾವಿರ ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿದ್ದು, ಇದು ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು.ಈ ಹಿನ್ನೆಲೆಯಲ್ಲಿ ಸೈಬರ್‌ ಕಮಾಂಡ್‌ ಕೇಂದ್ರ ಸ್ಥಾಪಿಸಲಾಗಿದ್ದು, ಅರಮನೆ ರಸ್ತೆಯಲ್ಲಿರುವ ಸಿಐಡಿ ಕಟ್ಟಡದಲ್ಲಿ ಇದರ ಪ್ರಧಾನ ಕಚೇರಿ ಇರಲಿದೆ.

Related Posts

Leave a Reply

Your email address will not be published. Required fields are marked *