ದೇವರು ಬಂದು ಜೀವ ಒಯ್ಯುತ್ತಾರೆ ಎಂದು ನಂಬಿ ಸೆಪ್ಟೆಂಬರ್ 8 ರಂದು ದೇವರನ್ನು ನೋಡುವುದಕ್ಕಾಗಿ 21 ಭಕ್ತರು ದೇಹತ್ಯಾಗ ಮಾಡಲು ಹೊರಟಿದ್ದ ಘಟನೆ ಬೆಳಗಾವಿಯ ಜಿಲ್ಲೆಯ ಅಥಣಿ ತಾಲೂಕಿನ ಅನಂತಪೂರ ಗ್ರಾಮದಲ್ಲಿ ನಡೆದಿದೆ.
ಅನಂತಪೂರ ಗ್ರಾಮದ ಇರಕರ ಕುಟುಂಬದ 4 ಜನ ಸೇರಿದಂತೆ 10ಕ್ಕೂ ಹೆಚ್ಚು ಭಕ್ತರು ಪ್ರಾಣ ತ್ಯಾಗಕ್ಕೆ ನಿರ್ಧಾರ ಮಾಡಿದ್ದರು. ಹರಿಯಾಣದ ವಿವಾದತ್ಮಕ ಸಂತ ರಾಮಪಾಲ ಅನುಯಾಯಿಗಳು ದೇಹತ್ಯಾಗ ಮಾಡಲು ಮುಂದಾಗಿದ್ದಾರೆ.
2014ರ ಗಲಭೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸಂತ ರಾಮಪಾಲ ಅವರ ಪುಸ್ತಕ ಓದಿ ಹಾಗೂ ಪ್ರವಚನ ಕೇಳಿ ಅನಂತಪುರ ಗ್ರಾಮದ ಇರಕರ ಕುಟುಂಬದ, ತುಕಾರಾಮ, ಸಾವಿತ್ರಿ, ರಮೇಶ್, ವೈಷ್ಣವಿ ಹಾಗೂ ಉತ್ತರ ಪ್ರದೇಶದ 17 ಭಕ್ತರು ಪ್ರಾಣ ತ್ಯಾಗಕ್ಕೆ ನಿರ್ಧಾರ ಮಾಡಿದ್ದರು. ಸಂತ ರಾಮಪಾಲ ಹರಿಯಾಣದ ಹಿಸ್ಸಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಹಲವಾರು ವಿವಾದಗಳು, ಅಂಧಭಕ್ತಿ ಪ್ರಚಾರದಿಂದ ದೇಶಾದ್ಯಂತ ಸುದ್ದಿಯಾಗಿದ್ದಾರೆ.
ಸೆಪ್ಟೆಂಬರ್ 8ರಂದು ನಾವು ಇಲ್ಲಿರಲ್ಲ. ಬಾಬಾ ಸ್ವತಃ ಬಂದು ನಮ್ಮನ್ನು ದೇಹ ಸಮೇತ ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಾರೆ. ನಾವು ದೇಹ ತ್ಯಾಗ ಮಾಡಲ್ಲ, ಬಾಬಾ ಬಂದು ಮೋಕ್ಷ ಕೊಡುತ್ತಾರೆ. ಈ ಬದುಕು ನಶ್ವರ. ದೇವರು ನಮಗೆ ಮುಕ್ತಿ ಮಾರ್ಗ ತೋರಿದ್ದಾನೆ. ಸೆಪ್ಟೆಂಬರ್ 8ರ ನಂತರ ನಾವು ಯಾರಿಗೂ ಕಾಣಿಸಿಕೊಳ್ಳಲ್ಲ ಎಂದು ಇರಕರ ಕುಟುಂಬದವರು ಗ್ರಾಮಸ್ಥರಿಗೆ ಹೇಳಿದ್ದರು.
ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕೋಡಿ ಉಪ ವಿಬಾಗಾಧಿಕಾರಿ ಸುಭಾಷ ಸಂಪಗಾಂವಿ ಹಾಗೂ ಪೊಲೀಸರು ಭಕ್ತರ ಮನವೊಲಿಕೆ ಮಾಡಿದ ಬಳಿಕ ದೇಹತ್ಯಾಗ ನಿರ್ಧಾರದಿಂದ ಭಕ್ತರು ಹಿಂದೆ ಸರಿದಿದ್ದಾರೆ.