ಬೆಂಗಳೂರು: ಕಾಳಿ ನದಿ ಯೋಜನೆ 1ನೇ ಹಂತದ ಸೂಪಾ ಅಣೆಕಟ್ಟೆಯ ಕೆಳದಂಡೆ ಮತ್ತು ನದಿ ಪಾತ್ರದುದ್ದಕ್ಕೂ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ದ ವತಿಯಿಂದ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಕೆಪಿಸಿಎಲ್, ಸೂಪಾ ಅಣೆಕಟ್ಟೆಯ ಜಲಾನಯನ ಪ್ರದೇಶಗಳಲ್ಲಿ ಸತತ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಹೇರಳ ನೀರು ಹರಿದು ಜಲಾಶಯದ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಆದ್ದರಿಂದ ಸೂಪಾ ಅಣೆಕಟ್ಟೆಯ ಕೆಳದಂಡೆ ಮತ್ತು ನದಿಯ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಸರಂಜಾಮುಗಳು, ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವಂತೆ ಮನವಿ ಮಾಡಿದೆ.
ಅಲ್ಲದೆ, ಸೂಪಾ ಅಣೆಕಟ್ಟೆಯ ಕೆಳಭಾಗದ ನದಿ ಪಾತ್ರದಲ್ಲಿ ದೋಣಿ ಸಂಚಾರ, ಮೀನುಗಾರಿಕೆ ಮತ್ತು ಇತರೆ ಚಟುವಟಿಕೆಗಳನ್ನು ಮಳೆಗಾಲ ಮುಗಿಯುವವರೆಗೂ ನಡೆಸದಂತೆ ಮನವಿ ಮಾಡಿದೆ.
ಸೂಪಾ ಜಲಾಶಯದ ಗರಿಷ್ಠ ಮಟ್ಟವು 564 ಮೀಟರ್ ಆಗಿದ್ದು, 147.55 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಜಲಾಶಯದ ನೀರಿನ ಮಟ್ಟವು 550.75ರಷ್ಟಿದ್ದು, 96.245 ಟಿಎಂಸಿ ನೀರು ಸಂಗ್ರಹವಾಗಿ ಜಲಾಶಯದ ನೀರಿನ ಸಾಮರ್ಥ್ಯ ಶೇ. 65.23ಕ್ಕೆ ಏರಿಕೆಯಾಗಿದೆ.
ಪ್ರಸ್ತುತ ನೀರಿನ ಒಳಹರಿವು 13,481 ಕ್ಯೂಸೆಕ್ ಇದ್ದು, ಇದೇ ರೀತಿ ನೀರು ಹರಿದುಬಂದರೆ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ. ಆದ್ದರಿಂದ ಜಲಾಶಯದ ಸುರಕ್ಷತಾ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತದೆ. ಹೀಗಾಗಿ ಕೆಪಿಸಿಎಲ್ ನದಿ ಕೆಳಭಾಗದ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಿದೆ.