ಚಾಮರಾಜನಗರದ ನಂಜೇದೇವನಪುರ ಗ್ರಾಮದ ಬಳಿ 5 ಹುಲಿಗಳು ಕಾಣಿಸಿಕೊಂಡಿರುವ ಹಿನ್ನೆಲೆ ಸುರಕ್ಷತಾ ಕ್ರಮವಾಗಿ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಂಜೇದೇವನಪುರ, ವೀರನಪುರ ಹಾಗೂ ಉಡಿಗಾಲ ಗ್ರಾಮದ ಜಮೀನು ಗಳಲ್ಲಿ ಹುಲಿಗಳು ಓಡಾಡುತ್ತಿರುವುದು ಡ್ರೋನ್ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ಸ್ಥಳೀಯರಲ್ಲಿ ಭೀತಿ ಆವರಿಸಿಕೊಂಡಿದೆ. ಹೀಗಾಗಿ ಈ ಪ್ರದೇಶಗಳಲ್ಲಿ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಡ್ರೋನ್ ಕ್ಯಾಮೆರಾಗಳಲ್ಲಿ ಐದು ಹುಲಿಗಳು ಓಡಾಟ ನಡೆಸುತ್ತಿರುವ ದೃಶ್ಯ ಸೆರೆಯಾಗಿದೆ. ಸಾಕಾನೆಗಳ ಮೂಲಕವೂ ಹುಲಿ ಸೆರೆ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ನಿಂತು ಹೋದ ಕ್ವಾರಿಗಳನ್ನು ಹುಲಿಗಳು ಆವಾಸ ಸ್ಥಾನ ಮಾಡಿ ಕೊಂಡಿವೆ, ಅವುಗಳನ್ನು ಓಡಿಸುವುದು ಬೇಡ, ಸೆರೆಹಿಡಿಯಿರಿ ಎಂದು ರೈತರು ಒತ್ತಾಯಿಸಿದ್ದಾರೆ. ಹುಲಿ ಸೆರೆ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳಕ್ಕೆ ಶಾಸಕ ಪುಟ್ಟರಂಗಶೆಟ್ಟಿ ಭೇಟಿ ನೀಡಿ ಅವಲೋಕಿಸಿದ್ದಾರೆ. ಹುಲಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಶಾಸಕರು ಈ ಸಂಬಂಧ ಮಾಹಿತಿಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ದೂರವಾಣಿ ಮೂಲಕ ನೀಡಿದ್ದಾರೆ. ಹುಲಿ ಸೆರೆ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಹೆಚ್ಚುವರಿ ಡ್ರೋನ್ ಹಾಗೂ ಪಶುವೈದ್ಯರ ತಂಡ ಕಳಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಈಗ ಒಂದೇ ಒಂದು ಥರ್ಮಲ್ ಈಗಲ್ ಡ್ರೋನ್ ಇದ್ದು, ಹುಲಿಗಳಿರುವ ಸ್ಥಳ ಪತ್ತೆ ಕಾರ್ಯ ನಡೆಯುತ್ತಿದೆ ಅಂತ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಸಕಾರಾತ್ಮಕವಾಗಿ ಸ್ಪಂದಿಸಿರುವ ಈಶ್ವರ್ ಖಂಡ್ರೆ ಶೀಘ್ರವೇ ಹೆಚ್ಚುವರಿ ಡ್ರೋನ್, ವಿಶೇಷ ತಂಡ ಕಳಿಸಿಕೊಡೋದಾಗಿ ಭರವಸೆ ನೀಡಿದ್ದಾರೆ.


