ರಾಜ್ಯದ ದೇವಸ್ಥಾನಗಳಿಗೆ ಸೂರು ಕಲ್ಪಿಸುವ ಹಾಗೂ ದೇಗುಲಗಳ ನಿರ್ವಹಣೆ ಮಾಡುವ ಧಾರ್ಮಿಕ ದತ್ತಿ ಇಲಾಖೆಗೆ ಸ್ವಂತ ಸೂರಿಲ್ಲದ ಕಾರಣ 5 ಮಹಡಿಯ ಧಾರ್ಮಿಕ ಸೌಧ ನಿರ್ಮಾಣಕ್ಕೆ ರಾಮಲಿಂಗ ರೆಡ್ಡಿ ಪ್ಲ್ಯಾನ್ ಮಾಡಿದ್ದಾರೆ.
ರಾಜ್ಯದಲ್ಲಿನ ಸಾವಿರಾರು ದೇವಸ್ಥಾನಗಳ ಸುಪರ್ದಿ, ಅವುಗಳ ನಿರ್ವಹಣೆಗೆ ಅನುದಾನ ನೀಡುವ ಮುಜರಾಯಿ ಇಲಾಖೆ ಈಗಲೂ ಚಾಮರಾಜಪೇಟೆ ಮಿಂಟೋ ಆಸ್ಪತ್ರೆ ಬಳಿ ಇರುವ ಖಾಸಗಿ ಕಟ್ಟಡದಲ್ಲಿ ಮಾಸಿಕ 11 ಲಕ್ಷ ರೂ. ಬಾಡಿಗೆ ಪಾವತಿಸುತ್ತ ಕಾರ್ಯ ನಿರ್ವಹಿಸುತ್ತಿದೆ. ಕೇಂದ್ರ ಕಚೇರಿ ಬಾಡಿಗೆ ಮೊತ್ತವೇ ವಾರ್ಷಿಕ 1.32 ಕೋಟಿ ರೂ. ಆಗುತ್ತಿದೆ.
ಹೀಗಾಗಿ ಇಲಾಖೆಗೆ ಸಂಬಂಧಿಸಿದ ಎಲ್ಲ ಕಚೇರಿಗಳು ಒಂದೆಡೆ ಸಿಗುವಂತೆ ಧಾರ್ಮಿಕ ಸೌಧ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಲಾಗಿದೆ. ಇದಕ್ಕಾಗಿ ಧಾರ್ಮಿಕ ಸೌಧ ನಿರ್ಮಾಣಕ್ಕೆ ಕೆ ಆರ್ ವೃತ್ತದ ರಾಮಾಂಜನೇಯ ದೇವಸ್ಥಾನಕ್ಕೆ ಸೇರಿದ 919 ಚದರ ಮೀ. ಭೂಮಿ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.
27.70 ಕೋಟಿ ರೂ. ವೆಚ್ಚದಲ್ಲಿ ಧಾರ್ಮಿಕ ಸೌಧ ನಿರ್ಮಾಣವಾಗಲಿದೆ. ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಲೋಕೋಪಯೋಗಿ ಇಲಾಖೆ ಕಟ್ಟಡ ನೀಲಿ ನಕ್ಷೆ ಸಿದ್ಧಪಡಿಸಿದ್ದು, ಹೊಯ್ಸಳ ಶೈಲಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಲಾಗಿದೆ. ಕಟ್ಟಡದಲ್ಲಿ ದ್ರಾವಿಡ, ನಾಗರ ಶೈಲಿ ಮಿಶ್ರಣವಿರಲಿದೆ. ರಾಮಾಯಣ, ಮಹಾಭಾರತ ದೃಶ್ಯಾಂಶ ವಿವರಿಸುವ ಕೆತ್ತನೆ ಹಾಗೂ ಕಲಾಕೃತಿ ಇರಲಿದೆ.