ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ವಿ ಕೋಟ ನಾಕಿನೇರಿ ಘಾಟ್ ಬಳಿ ಚೆನ್ನೈನಿಂದ ಕೆಜಿಎಫ್‍ಗೆ ತರುತ್ತಿದ್ದ ಚಿನ್ನಾಭರಣವನ್ನು ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಜಿಎಫ್ ಪೊಲೀಸರು ಮತ್ತೆ ಐದು ಮಂದಿಯನ್ನು ಬಂಧಿಸಿದ್ದಾರೆ.
ಮೂರುವರೆ ಕೋಟಿ ರೂ. ಮೌಲ್ಯದ 3.5 ಕೆಜಿ ಚಿನ್ನಾಭರಣ ದೋಚಿದ್ದ ಪ್ರಕರಣದ ಬಂಧಿತರನ್ನು ತಮಿಳುನಾಡು ಮೂಲದ ಪಿ.ವೇದಾವಲಂ, ಕುಮಾರನ್, ರಂಜಿತ್, ಶಂಕರ್, ದೇಬೇಶ್ ಚಕ್ರವರ್ತಿ ಮತ್ತು ವೇಲು ಎಂದು ಗುರುತಿಸಲಾಗಿದೆ. ಇನ್ನೂ ಮೂರ್ನಾಲ್ಕು ಮಂದಿ ಪ್ರಕರಣದಲ್ಲಿ ಭಾಗಿಯಾಗಿದ್ದು ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ಹೇಳಿದ್ದಾರೆ.
ಪ್ರಕರಣದ 8ನೇ ಆರೋಪಿ ಅಪ್ಪು ಎಂಬಾತ ತಮಿಳುನಾಡಿನ ಕಂಬಟ್ಟು ಬಳಿ ಮರಕ್ಕೆ ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಏ.2 ರಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ವಿ ಕೋಟ ನಾಕಿನೇರಿ ಘಾಟ್ ಬಳಿ ಚೆನ್ನೈನಿಂದ ಕೆಜಿಎಫ್‍ಗೆ ತರುತ್ತಿದ್ದ ಚಿನ್ನಾಭರಣವನ್ನು ದರೋಡೆ ಮಾಡಲಾಗಿತ್ತು.
ಕೆಜಿಎಫ್‍ನ ಚಿನ್ನದಂಗಡಿಯೊಂದರ ಮಾಲೀಕ ದೀಪಕ್ ಜೈನ್ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಈಗಾಗಲೇ ಕೆಜಿಎಫ್ ಮೂಲದ ನಾಲ್ಕು ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.