ಹೈದರಾಬಾದ್ನ ಮಿಯಾಪುರ ಮಕ್ತಾ ಮಹಬೂಬ್ಪೇಟೆಯಲ್ಲಿ ಕಲಬುರಗಿಯ ಒಂದೇ ಕುಟುಂಬದ ಐವರು ಮೃತಪಟ್ಟಿದ್ದು, ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ. ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಮೃತರನ್ನು ನರಸಿಂಹ (60), ವೆಂಕಟಮ್ಮ (55), ಅನಿಲ್ (32), ಕವಿತಾ (24), ಮತ್ತು ಅಪ್ಪು (2) ಎಂದು ಗುರುತಿಸಲಾಗಿದೆ. ಕಲಬುರಗಿಯ ಲಕ್ಷ್ಮಯ್ಯ ಅವರ ಕುಟುಂಬವು ಹೈದರಾಬಾದ್ನಲ್ಲಿ ವಾಸಿಸುತ್ತಿತ್ತು. ನರಸಿಂಹ ಅವರಿಗೆ ಮೂವರು ಹೆಣ್ಣು ಮಕ್ಕಳು. ನರಸಿಂಹ, ಪತ್ನಿ ವೆಂಕಟಮ್ಮ, ಎರಡನೇ ಮಗಳು,ಅಳಿಯ, ಮೊಮ್ಮಗು ಜೊತೆ ಮಕ್ತಾ ಮಹಬೂಬ್ಪೇಟೆಯಲ್ಲಿ ವಾಸವಿದ್ದರು.
ನರಸಿಂಹ ಸೇರಿದಂತೆ ಇಡೀ ಕುಟುಂಬ ಕೂಲಿ ಕೆಲಸಗಳನ್ನು ಮಾಡುವ ಮೂಲಕ ಜೀವನ ಸಾಗಿಸುತ್ತಿತ್ತು. ಬುಧವಾರ ರಾತ್ರಿ ಅವರೆಲ್ಲರೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆರ್ಥಿಕ ಸಮಸ್ಯೆಗಳಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡರೇ ಅಥವಾ ಬೇರೆ ಯಾವುದೇ ಕಾರಣಗಳಿವೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ದುರಂತದ ಕುರಿತು ಹೆಚ್ಚಿನ ವಿವರಗಳು ತನಿಖೆಯ ಬಳಿಕ ಲಭ್ಯವಾಗಲಿದೆ.