Menu

ಗ್ರೇಟರ್ ಬೆಂಗಳೂರಿನಲ್ಲಿ ಐದು ಪಾಲಿಕೆ ರಚನೆ, ಶೀಘ್ರ ಚುನಾವಣೆ: ಡಿಕೆ ಶಿವಕುಮಾರ್

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ಪಾಲಿಕೆ ರಚನೆ ಮಾಡಿ, ಶೀಘ್ರ ಚುನಾವಣೆ ನಡೆಸುತ್ತೇವೆ ಎಂದು  ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿ ಭಾರತ್ ಜೋಡೋ ಭವನದಲ್ಲಿ  ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ, ಜಿಲ್ಲೆ, ತಾಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

ಜಿಬಿಎ ರಚನೆ ಮಾಡಲಾಗಿದೆ ಈ ಮೂಲಕ ಐದು ಪಾಲಿಕೆಗಳನ್ನು ನಾವು ಮಾಡಿಯೇ ತೀರುತ್ತೇವೆ. ಈ ಕುರಿತು ಶಾಸಕ ರಿಜ್ವಾನ್ ನೇತೃತ್ವದಲ್ಲಿ ಸಮಿತಿ ಮಾಡಲಾಗಿದೆ. ಕೆಲವರು ಸಾರ್ವಜನಿಕವಾಗಿ ವಿರೋಧ ಮಾಡಬಹುದು ಆದರೆ ಆಡಳಿತ ದೃಷ್ಟಿಯಿಂದ ಇದನ್ನು ಮಾಡಲೇಬೇಕಾಗಿದೆ. ಪಾಲಿಕೆಗಳು ರಚನೆಯಾದರೆ ನಮ್ಮ ಕಾರ್ಯಕರ್ತರಿಗೆ ಹೆಚ್ಚಿನ ಸ್ಥಾನ ಮಾನ ನೀಡಲೇಬೇಕು ಎಂದು ನಾವು ತೀರ್ಮಾನಿಸಿದ್ದೇವೆ. ಇದಕ್ಕೆ ಅಡಿಪಾಯ ತಯಾರು ಮಾಡಬೇಕಿದೆ. ಏಕೆಂದರೆ ಡಿ.ಕೆ.ಶಿವಕುಮಾರ್ ಒಬ್ಬನೇ ಸರ್ಕಾರ ತರಲು ಆಗುವುದಿಲ್ಲ. ಕಾರ್ಯಕರ್ತರೇ ಇಲ್ಲಿ ಜೀವಾಳ. ನಾವು ವಿಧಾನಸೌಧದಲ್ಲಿ ತೀರ್ಮಾನ ಮಾಡಬಹುದು ಆದರೆ ಸರ್ಕಾರದ ರಾಯಭಾರಿಗಳು ನೀವು. ನಮ್ಮ ಭವಿಷ್ಯ, ಬೆಂಗಳೂರು ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದರು.

ನಮ್ಮ ಸರ್ಕಾರ ಸಮಾಜ ಹಾಗೂ ಬಡವರ ಕಲ್ಯಾಣಕ್ಕಾಗಿ 1 ಲಕ್ಷ ಕೋಟಿ ರೂಪಾಯಿ ಹಣ ನೀಡಿದೆ. 50 ಸಾವಿರ ಕೋಟಿ ಗ್ಯಾರಂಟಿಗಳಿಗೆ ವೆಚ್ಚವಾದರೆ 19 ಸಾವಿರ ಕೋಟಿ ಹಣವನ್ನು ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್,  11 ಸಾವಿರ ಕೋಟಿಯನ್ನು ಪಿಂಚಣಿಗಳಿಗೆ ವೆಚ್ಚ ಮಾಡಲಾಗುತ್ತಿದೆ. ರಾಜ್ಯ ಬಜೆಟ್ಟಿನ 25% ಹಣವನ್ನು ಜನರಿಗೆ ನೀಡುತ್ತಿದ್ದೇವೆ. ಈ ಉಪಕಾರ ಸ್ಮರಣೆಯನ್ನು ಜನರಿಗೆ ಮನದಟ್ಟು ಮಾಡಬೇಕಿರುವುದು ನಿಮ್ಮ ಕರ್ತವ್ಯ ಎಂದು ಹೇಳಿದರು.

ಈ ದೇಶದ ಇತಿಹಾಸದಲ್ಲಿ ಕಾಂಗ್ರೆಸ್ ನೀಡಿರುವ ಹಲವಾರು ಕಾರ್ಯಕ್ರಮಗಳನ್ನು ಯಾರೂ ಸಹ ನಿಲ್ಲಸಲು ಸಾಧ್ಯವಿಲ್ಲ. ಉಳುವವನೆ ಭೂಮಿಯ ಒಡೆಯ, ಅಂಗನವಾಡಿ, ಆಶಾ, ನರೇಗಾ ಹೀಗೆ ನೂರಾರು ಕಾರ್ಯಕ್ರಮಗಳು ಕಾಂಗ್ರೆಸ್ ಜನರಿಗೆ ನೀಡಿರುವ ಶಕ್ತಿ. ಅರಣ್ಯ ಭೂಮಿ ಹಕ್ಕು, ಆಹಾರ ಭದ್ರತಾ ಕಾಯ್ದೆಗಳನ್ನು ಬಿಜೆಪಿಯವರು ಬದಲಾವಣೆ ಮಾಡಲು ಸಾಧ್ಯವಾಯಿತೇ? ರೈತರ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ನೀಡಿದ್ದು ಬಂಗಾರಪ್ಪ ಅವರು. ನಾವು ಯಾವುದೇ ರಾಜಕೀಯ ದೃಷ್ಟಿ ಇಟ್ಟುಕೊಂಡು ನಾವು ಕೆಲಸ ಮಾಡುತ್ತಿಲ್ಲ. ಜನರ ಅಭಿವೃದ್ದಿಗಾಗಿ ಕೆಲಸ ಮಾಡುತ್ತಿದ್ದೇವೆ. ಬ್ಯಾಂಕ್ ಗಳ ರಾಷ್ಟ್ರೀಕರಣದಿಂದ ಬ್ಯಾಂಕ್ ಗಳೇ ಮನೆ ಬಾಗಿಲಿಗೆ ಬಂದಿವೆ. ಬಿಸಿಯೂಟ, ಅನ್ನಭಾಗ್ಯ ಇದೆಲ್ಲವೂ ಕ್ರಾಂತಿಕಾರಕ ಯೋಜನೆಗಳು. ಹಟ್ಟಿ, ತಾಂಡಾಗಳಲ್ಲಿ ವಾಸವಿರುವ ಜನರು ಯಾವುದೇ ಭೂ ದಾಖಲೆಗಳನ್ನು ಹೊಂದಿರಲಿಲ್ಲ. ಅವರಿಗೆಲ್ಲ ಉಚಿತವಾಗಿ ಭೂ ದಾಖಲೆಗಳನ್ನು ನೀಡಲಾಗುತ್ತಿದೆ. ಇತ್ತೀಚೆಗೆ 1,11,111 ದಾಖಲೆಗಳನ್ನು ನೀಡಲಾಯಿತು ಎಂದರು.

ದೇಶದ ಇತಿಹಾಸದಲ್ಲಿಯೇ ಹೊಸ ಅಧ್ಯಾಯವನ್ನು ನಮ್ಮ ಸರ್ಕಾರ ಪ್ರಾರಂಭ ಮಾಡಿದೆ. ಬಿಜೆಪಿಯವರು ಭಾವನೆ ಮೇಲೆ ರಾಜಕಾರಣ ಮಾಡಿದರೆ ನಾವು ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ರಣದೀಪ್ ಸುರ್ಜೇವಾಲಾ ಅವರಿಗೆ ನಾವು ಮೊದಲು ಧನ್ಯವಾದಗಳನ್ನು ತಿಳಿಸಬೇಕು. ಏಕೆಂದರೆ ಗ್ಯಾರಂಟಿ ಸಮಿತಿಗಳನ್ನು ರಚನೆ ಮಾಡಿ ಕಾರ್ಯಕರ್ತರು ಸರ್ಕಾರದ ಈ ಯೋಜನೆಯ ಭಾಗವಾಗಬೇಕು. ಸರ್ಕಾರ ಮುಖವಾಣಿಯಾಗಿ ಕೆಲಸ ಮಾಡಬೇಕು ಎಂದು ಅವರು ಸೂಚನೆ ನೀಡಿದ ಕಾರಣಕ್ಕೆ ನೀವು ಅತ್ಯುತ್ತಮ ಸ್ಥಾನದಲ್ಲಿ ಕುಳಿತಿದ್ದೀರಿ ಎಂದು ಹೇಳಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯವರಿಗೆ ನಿಮ್ಮ ಬೆಲೆ ಏನು ಎಂಬುದು ಅರ್ಥವಾಗಿಲ್ಲ. ನೀವು ಸರ್ಕಾರದ ಪ್ರತಿನಿಧಿಗಳು. ಕರ್ನಾಟಕದ, ಸರ್ಕಾರದ ದನಿ. ನಿಮಗೆ ಸರ್ಕಾರದ ಚಿಹ್ನೆ ನೀಡಲಾಗಿದೆ, ಅಧ್ಯಕ್ಷರುಗಳಿಗೆ ಕಚೇರಿ ನೀಡಲಾಗಿದೆ. ವಿಪಕ್ಷಗಳು ಸದನದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಗಳ ವಿರುದ್ದ ಕೋಲಾಹಲ ಎಬ್ಬಿಸಿದರು. ಶಾಸಕರ ಕಾರ್ಯಪ್ರಗತಿ ಮಾಡಲು ನೀವುಗಳು ಯಾರು ಎಂದು ಪ್ರಶ್ನೆ ಮಾಡಿದರು. ಇವರುಗಳನ್ನು ನಮ್ಮ ಕೆಳಗೆ ಉಪಾಧ್ಯಕ್ಷರನ್ನಾಗಿ ಮಾಡಿ ಎಂದರು. ಶಾಸಕರ ಸ್ಥಾನಕ್ಕೆ ಕುತ್ತು ತಂದಿದ್ದೀರಿ. ನಮ್ಮ ಪಕ್ಕ ಕುರ್ಚಿ ಹಾಕಿದ್ದೀರಿ ಎಂದೆಲ್ಲ ಹೇಳಿದರು ಅವರ ಮಾತುಗಳಿಗೆ ನಾವು ಬಗ್ಗಲಿಲ್ಲ ಎಂದರು.

ನಮ್ಮ ಕಾರ್ಯಕರ್ತರಿಗೆ ಶಕ್ತಿ ತುಂಬುವುದು ನಮ್ಮ ಕರ್ತವ್ಯ. ನಮ್ಮನ್ನು ಅಧಿಕಾರಕ್ಕೆ ತಂದ ನಿಮಗೆ ಅಧಿಕಾರ ನೀಡಿದ್ದೇವೆ. ಆಸ್ಪತ್ರೆ, ಬಗರ್ ಹುಕುಂ ಸೇರಿದಂತೆ ಅನೇಕ ಸಮಿತಿಗಳಲ್ಲಿ ನಿಮಗೆ ಅವಕಾಶ ನೀಡಿದ್ದೇವೆ. ನಾನು ಸಹಕಾರ ಮಂತ್ರಿಯಾಗಿದ್ದಾಗ, ವಿದ್ಯುತ್ಛಕ್ತಿ ಸಚಿವನಾಗಿದ್ದಾಗ ಸಮಿತಿಗಳಲ್ಲಿನ ಸದಸ್ಯರ ಸಂಖ್ಯೆ ಹೆಚ್ಚಳ ಮಾಡಿದ್ದೆ. ಪ್ರತಿ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ದುಡಿದ ಎಲ್ಲಾ ವರ್ಗದ 15 ಜನರನ್ನು ಗುರುತಿಸಿ ನಿಮಗೆ ಅಧಿಕಾರ ನೀಡಲಾಗಿದೆ ಎಂದು ತಿಳಿಸಿದರು.

ನಿಮ್ಮಲ್ಲಿ ಹಲವರು ಕ್ಷೇತ್ರ ಮಟ್ಟದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ವಿರೋಧ ಪಕ್ಷದವರ ನೋವು, ದುಃಖ ನೋಡುತ್ತಿದ್ದರೆ ನೀವು ಎಷ್ಟು ಚೆನ್ನಾಗಿ ಕೆಲಸ ಮಾಡುತ್ತಿದ್ದೀರಿ ಎಂದು ಗೊತ್ತಾಗಿದೆ. ಮುಂದೆ ಎಲ್ಲಾ ಕ್ಷೇತ್ರಗಳ ಗ್ಯಾರಂಟಿ ಸಮತಿ ಸದಸ್ಯರನ್ನು ಕರೆಸಿ ಮಾತನಾಡುತ್ತೇನೆ. ಎಲ್ಲರಿಗೂ ನಾವು ಶಕ್ತಿ, ಮಾರ್ಗದರ್ಶನ ನೀಡಬೇಕು ಎಂದರು.

ನಮ್ಮ ಸರ್ಕಾರ ಐದು ಗ್ಯಾರಂಟಿ ಜೊತೆಗೆ ಭೂ ಗ್ಯಾರಂಟಿ ನೀಡಿದೆ. ಈಗ ಬೆಂಗಳೂರು ನಗರದಲ್ಲಿ ಎಲ್ಲಾ ಆಸ್ತಿ ಖಾತಾ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಅನೇಕ ಆಸ್ತಿ ಮಾಲೀಕರಿಗೆ ತಮ್ಮ ಆಸ್ತಿ ಯಾರ ಹೆಸರಲ್ಲಿದೆ ಎಂಬುದೇ ಗೊತ್ತಿಲ್ಲ. ಅವರ ತಾತ, ಮುತ್ತಾತನ ಹೆಸರಿನಲ್ಲಿ ಖಾತೆಗಳಿವೆ. ಇದನ್ನು ಸರಿಪಡಿಸಿ ದಾಖಲೆಗಳನ್ನು ನೀಡಲು ಮುಂದಾಗಿದೆ. ಕೃಷ್ಣಭೈರೇಗೌಡ ಅವರ ಕ್ಷೇತ್ರದಲ್ಲಿ ಈ ಕಾರ್ಯಕ್ರಮ ಮಾಡಿದ್ದು, ಅಲ್ಲಿ ಪ್ರತಿ ವಾರ್ಡ್ ನಲ್ಲಿ 20-30 ಕಾರ್ಯಕರ್ತರಂತೆ, ಇಡೀ ಕ್ಷೇತ್ರದಲ್ಲಿ ಸಾವಿರಾರು ಕಾರ್ಯಕರ್ತರು ಸ್ಥಳೀಯರ ಮನೆಮನೆಗೆ ಹೋಗಿ, ಅರ್ಜಿ ಕೊಟ್ಟು ಅದನ್ನು ತುಂಬಿಸಿ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದರು.

ವಾರ್ಡ್, ಪಂಚಾಯ್ತಿ ಮಟ್ಟದಲ್ಲಿ ಗ್ಯಾರಂಟಿ ಸಮಾವೇಶ

ನೀವು ಕೂಡ ಈ ಕೆಲಸ ಮಾಡಬೇಕು. ಪ್ರತಿ ವಾರ್ಡ್, ಪಂಚಾಯ್ತಿಯಲ್ಲಿ ಗ್ಯಾರಂಟಿ ಸಮಾವೇಶ ಮಾಡುವುದರ ಬಗ್ಗೆ ಚರ್ಚಿಸುತ್ತಿದ್ದೇವೆ. ಆಮೂಲಕ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು. ಇಂದಿನ ಕಾರ್ಯಕ್ರಮಕ್ಕೆ ಪರಾಜಿತ ಅಭ್ಯರ್ಥಿಗಳು, ಬ್ಲಾಕ್ ಅಧ್ಯಕ್ಷರು, ಮಾಜಿ ಕೌನ್ಸಲರ್ ಗಳನ್ನು ಕರೆಸಿದ್ದು, ನೀವು ಈ ವಿಚಾರವಾಗಿ ಯಾವ ರೀತಿ ಕೆಲಸ ಮಾಡುತ್ತೀರಿ ಅದರ ಮೇಲೆ ನಿಮ್ಮ ಹಣೆಬರಹ ನಿರ್ಧಾರವಾಗಲಿದೆ. ಡಿಕೆ ಶಿವಕುಮಾರ್, ಹೆಚ್‌ಎಂ ರೇವಣ್ಣ ಹಿಂದೆ ಗಿರಕಿ ಹೊಡೆದರೆ ಪಾಲಿಕೆ ಚುನಾವಣೆ ಟಿಕೆಟ್ ಸಿಗುತ್ತದೆ ಎಂದು ನೀವು ಭಾವಿಸಿದ್ದರೆ, ಅದನ್ನು ತಲೆಯಿಂದ ತೆಗೆದುಹಾಕಿ. ನೀವು ಸ್ಥಳೀಯ ಮಟ್ಟದಲ್ಲಿದ್ದು ಕೆಲಸ ಮಾಡಬೇಕು ಎಂದರು.

ಸರ್ಕಾರ ವಾರ್ಡ್, ಮೀಸಲಾತಿ ತೀರ್ಮಾನ ಮಾಡಲಿದೆ. ಯಾರು ಜನರ ಮಧ್ಯೆ ಇರುತ್ತಾರೆ ಅವರು ಮಾತ್ರ ಗೆಲ್ಲಲು ಸಾಧ್ಯ. ನೀವು ಬೂತ್ ಮಟ್ಟದಲ್ಲಿ ಜನ ಸಂಪರ್ಕ, ಪ್ರೀತಿ ಇಟ್ಟುಕೊಳ್ಳಬೇಕು. ಪಾಲಿಕೆ ಅಧಿಕಾರಿಗಳಿಗೆ ಹೇಳಿ ನಿಮಗೆ ಗ್ಯಾರಂಟಿ ಸಮಿತಿಯ ಗುರುತಿನ ಚೀಟಿ ಕೊಡಿಸುತ್ತೇನೆ. ಆಗ ನೀವು ಮನೆ ಮನೆಗೆ ಹೋಗಿ ಅವರನ್ನು ಸಂಪರ್ಕಿಸುವ ಅಧಿಕಾರ ಸಿಗುತ್ತದೆ. ಗ್ಯಾರಂಟಿ ಸಮಿತಿ ಅಧ್ಯಕ್ಷರುಗಳಿಗೆ ಕಚೇರಿ ಕೊಟ್ಟ ಇತಿಹಾಸ ಬೇರೆ ಎಲ್ಲಾದರೂ ಇದೆಯೇ, ಇಲ್ಲ. ನಾನು ಕಾರ್ಯಕರ್ತನಾಗಿ ಬಂದವನು. ಎನ್ಎಸ್ ಯುಐನಿಂದ ಇಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷನಾಗಿ ದ್ದೇನೆ. ನನಗೆ ನಿಮ್ಮ ನೋವು ಅರಿವಾಗುತ್ತದೆ. ಅಧಿಕಾರ ಹಂಚಿಕೆ ಸಂದರ್ಭದಲ್ಲಿ ನಾವು ಎಲ್ಲರಿಗೂ ಸ್ಥಾನಮಾನ ನೀಡಲು ಆಗದೇ ಇರಬಹುದು. ಆದರೆ ಯಾವುದಾದರೂ ಒಂದು ಸಂದರ್ಭದಲ್ಲಿ ಅವಕಾಶ ಸಿಕ್ಕಾಗ ನಿಮಗೆ ಸೂಕ್ತ ಅಧಿಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.

33% ಮೀಸಲಾತಿ ಜಾರಿಯಾದರೆ 75 ಮಹಿಳಾ ಶಾಸಕಿಯರು

ಕಾರ್ಯಕರ್ತರು ಯಾವುದಕ್ಕೂ ಚಿಂತನೆ ಮಾಡಬೇಡಿ. ಎಲ್ಲರೂ ಶಾಸಕರು, ಪಾಲಿಕೆ ಸದಸ್ಯರು ಆಗಲು ಆಗುವುದಿಲ್ಲ. ಮನೆಯಲ್ಲಿ ಬೈದರೂ ಕೂಡ ನಮ್ಮ ಮಹಿಳಾ ಕಾರ್ಯಕರ್ತರು ಪಕ್ಷಕ್ಕಾಗಿ ದುಡಿಯುತ್ತಾರೆ. ಅವರಿಗಾಗಿ ಏನಾದರೂ ಮಾಡಲೇಬೇಕು. ಇದಕ್ಕಾಗಿ ರಾಜಕೀಯದಲ್ಲಿ 33% ಮೀಸಲಾತಿ ತರಲು ನಾವು ಪ್ರಯತ್ನ ಮಾಡಿದ್ದೆವು. ಮುಂದೆ ಇದು ಜಾರಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಗೆ ಇದನ್ನು ಜಾರಿಗೆ ತರಲು ಸಿದ್ಧತೆ ನಡೆಯುತ್ತಿದೆ. ಇದು ಜಾರಿಯಾದರೆ, ನಮ್ಮ ಜೊತೆಗೆ 75 ಜನ ಮಹಿಳಾ ಶಾಸಕಿಯರು ಇರುತ್ತಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ 50% ಮೀಸಲಾತಿ ನೀಡಿದ್ದೇವೆ ಎಂದರು.

ನಾಯಕತ್ವ ಬೆಳೆಸಲು ರಾಹುಲ್ ಗಾಂಧಿ ಅವರು ನಮಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಈಗ ನಿಂತುಹೋಗಿರುವ ಕಾಲೇಜುಗಳಲ್ಲಿ ವಿದ್ಯಾರ್ಥಿ ಮಟ್ಟದ ಚುನಾವಣೆಯನ್ನು ನಡೆಸಲು ಚರ್ಚಿಸುತ್ತಿದ್ದೇವೆ. ಪಕ್ಷದ ಸಂಘಟನೆಯಲ್ಲಿ ಶ್ರಮಿಸಿದವರಿಗೆ ಸ್ಥಾನಮಾನ ನೀಡಲು ಅಧ್ಯಕ್ಷ ಸ್ಥಾನ ನೀಡಿದ್ದೇವೆ. ನೀವು ನಿಮ್ಮ ಬೂತ್, ವಾರ್ಡ್ ಗಳಲ್ಲಿ ನೀವು ಬಲಿಷ್ಠವಾಗಿ. ನಿಮ್ಮ ಶಾಸಕರು, ಪರಾಜಿತ ಅಭ್ಯರ್ಥಿ ಮೂಲಕ ನಿಮ್ಮನ್ನು ಗುರುತಿಸಲಾಗುವುದು. ನೀವು ಬಲಿಷ್ಠವಾಗಿದ್ದಷ್ಟು ನಮ್ಮ ಅಭ್ಯರ್ಥಿಗಳು ಬಲಿಷ್ಠವಾಗಿರುತ್ತಾರೆ. ನೀವು ದುರ್ಬಲರಾದರೆ ಅವರೂ ದುರ್ಬಲರಾಗುತ್ತಾರೆ. ಕಾರ್ಯಕರ್ತರು ಶಕ್ತಿಶಾಲಿಯಾಗದಿದ್ದರೆ, ಪಕ್ಷ ಬಲಿಷ್ಠವಾಗಲು ಹೇಗೆ ಸಾಧ್ಯ ಎಂದರು.

ಈ ಗ್ಯಾರಂಟಿ ಸಮಿತಿಗಳು ಕೇವಲ ಪಂಚ ಗ್ಯಾರಂಟಿ ಯೋಜನೆಗೆ ಮಾತ್ರ ಸೀಮಿತವಲ್ಲ. ಸರ್ಕಾರದ ಎಲ್ಲಾ ಜನಪರ ಯೋಜನೆಗಳ ಬಗ್ಗೆ ಸರ್ಕಾರದ ಧ್ವನಿಯಾಗಬೇಕು. ಗ್ಯಾರಂಟಿ ಯೋಜನೆ, ಖಾತಾ ದಾಖಲೆ ಹಂಚಿಕೆ ಹೆಸರಿನಲ್ಲಿ ನೀವು ಜನರ ಮನೆ ಬಾಗಿಲಿಗೆ ಹೋಗಬಹುದು. ನೀವು ಮನೆ ಬಾಗಿಲಿಗೆ ಹೋಗಿ, ಜನರ ಮನ ಗೆಲ್ಲಬೇಕು. ಮುಂದೆ ಬರುವ ಪಾಲಿಕೆ ಚುನಾವಣೆಯಲ್ಲಿ ಐದು ಪಾಲಿಕೆಗಳಲ್ಲಿ ಪಕ್ಷವನ್ನು ಗೆಲ್ಲಿಸಬೇಕು ಎಂದು ಹೇಳಿದರು.

ಮಂಗಳೂರು ಭಾಗದಲ್ಲಿ ನಮಗೆ ಹೆಚ್ಚು ಸೋಲಾಗಿದೆ. ಆದರೆ ಗ್ಯಾರಂಟಿ ಯೋಜನೆಗಳಲ್ಲಿ ಹೆಚ್ಚು ಫಲಾನುಭವಿಗಳು ಇದೇ ಭಾಗದವರಿದ್ದಾರೆ. ಹೀಗಾಗಿ ಗ್ಯಾರಂಟಿ ಟೀಕಿಸುವ ವಿರೋಧ ಪಕ್ಷದವರಿಗೆ ನಾನು ಸವಾಲು ಹಾಕಿದೆ. ಗ್ಯಾರಂಟಿ ಯೋಜನೆ ಬೇಡವಾದರೆ ಅದನ್ನು ನಿಮ್ಮವರಿಂದ ಬರೆದು ಕಳಿಸಿ ಎಂದು ಹೇಳಿದೆ. ಗ್ಯಾರಂಟಿ ಯೋಜನೆ ಫಲ ಅನುಭವಿಸಿ ಅದನ್ನೇ ಟೀಕೆ ಮಾಡಿದರೆ ಹೇಗೆ? ನನಗೆ ಯುವಕರು ಹಾಗೂ ಮಹಿಳೆಯರ ಮೇಲೆ ಹೆಚ್ಚು ನಂಬಿಕೆ. ಹೀಗಾಗಿ ನಮ್ಮ ಗ್ಯಾರಂಟಿ ಯೋಜನೆಗಳು ಈ ವರ್ಗದವರ ಮೇಲೆ ಹೆಚ್ಚು ಕೇಂದ್ರೀಕೃತವಾಗಿದೆ. ಗ್ಯಾರಂಟಿ ಸಮಿತಿಯಲ್ಲಿ ಮಹಿಳೆಯರಿಗೆ ಜವಾಬ್ದಾರಿ ನೀಡಲಾಗಿದೆ. ನಮ್ಮ ಸರ್ಕಾರದ ಕೆಲಸಗಳನ್ನು ವಿರೋಧ ಪಕ್ಷಗಳು ಟೀಕೆ ಮಾಡುತ್ತಾರೆ. ಅವರು ಏನು ಬೇಕಾದರೂ ಟೀಕೆ ಮಾಡಲಿ. ಅವರ ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ ಎಂದರು.

ಕಾರ್ಯಕ್ರಮದ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಉತ್ತರಿಸಿದರು. ಟನಲ್ ರಸ್ತೆ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದೆ ಎನ್ನುವ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ಬಗ್ಗೆ ಕೇಳಿದಾಗ, ದೆಹಲಿ, ಮುಂಬೈ ಹಾಗೂ ದೇಶದ ಇತರೇ ಭಾಗಗಳಲ್ಲಿ ಟನಲ್ ರಸ್ತೆ ಮಾಡಲಾಗುತ್ತಿದೆ. ಅಲ್ಲೆಲ್ಲಾ ಯಾವ ಕಾರಣಕ್ಕೆ ಟನಲ್ ರಸ್ತೆ ಮಾಡಲಾಗುತ್ತಿದೆ. ಇಲ್ಲಿ ಮಾತ್ರ ಯಾಕೆ ವಿರೋಧ. ಆತನಿಗೆ (ತೇಜಸ್ವಿ ಸೂರ್ಯ) ಆನಂತರ ಉತ್ತರಿಸುತ್ತೇನೆ. ನಾವು ಏನೇ ಮಾಡಿದರು ಟೀಕೆ ಮಾಡುತ್ತಾರೆ. ಬಿಜೆಪಿ ಯಾವತ್ತಿಗೂ ಅಭಿವೃದ್ಧಿಯ ವಿರುದ್ಧವಾಗಿರುವ ಪಕ್ಷ. ಬೆಂಗಳೂರಿಗೆ ಅವರ ಕೊಡುಗೆ ಶೂನ್ಯ ಎಂದು ಹೇಳಿದರು.

ಮೆಟ್ರೋ ಡಿಪಿಆರ್‌ ಅನ್ನೇ ಟನಲ್‌ ರಸ್ತೆ ಡಿಪಿಆರ್‌ ಆಗಿ ನಕಲು ಮಾಡಲಾಗಿದೆ ಎಂದಾಗ, ಆತನಿಗೆ ಉತ್ತರ ನೀಡಲು ಹೋಗುವುದಿಲ್ಲ. ಮೆಟ್ರೋ ಕಾಂಗ್ರೆಸ್‌ ಪಕ್ಷದ ಕೊಡುಗೆ ಎಂದು ಖಡಕ್‌ ಆಗಿ ಉತ್ತರ ನೀಡಿದರು.

Related Posts

Leave a Reply

Your email address will not be published. Required fields are marked *