ದೀಪಾವಳಿ ಹಬ್ಬದೊಂದಿಗೆ ಸರಣಿ ರಜೆಗಳ ಹಿನ್ನೆಲೆ ಬೆಂಗಳೂರಿನಿಂದ ರಾಜ್ಯದ ನಾನಾ ಜಿಲ್ಲೆಗಳಿಗೆ ಜನರ ಪ್ರಯಾಣಕ್ಕೆ ಅನುಕೂಲವಾಗುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಹೆಚ್ಚುವರಿ ಬಸ್‌ಗಳನ್ನು ವ್ಯವಸ್ಥೆಗೊಳಿಸಿದೆ. ಅಕ್ಟೋಬರ್ 17ರಿಂದ 20ರ ವರೆಗೆ 2,500 ಹೆಚ್ಚುವರಿ ಬಸ್ ಕಾರ್ಯಾಚರಣೆ ನಡೆಸಲಿವೆ.
ಈ ಬಾರಿ ದೀಪಾವಳಿ ಹಬ್ಬದ ಸಮಯದಲ್ಲಿ ಸರಣಿ ರಜೆಗಳಿವೆ. ಅಕ್ಟೋಬರ್ 18 ಮತ್ತು 19ರಂದು ವಾರಾಂತ್ಯದ ರಜೆ, ಅಕ್ಟೋಬರ್ 20ರಂದು ನರಕ ಚತುರ್ದಶಿ, ಅಕ್ಟೋಬರ್22ರಂದು ಬಲಿಪಾಡ್ಯಮಿ ಹಬ್ಬವಿದೆ. ಅಕ್ಟೋಬರ್ 17ರಿಂದ 22ರ ವರೆಗೆ ಐದು ದಿನಗಳ ಸತತ ರಜೆಯನ್ನು ಹೆಚ್ಚಿನವರು ಪಡೆಯಲಿದ್ದಾರೆ. ಹೀಗಾಗಿ ಪ್ರಯಾಣಿಕರ ದಟ್ಟಣೆ ಹೆಚ್ಚಲಿದ್ದು, ಇದನ್ನು ಸುಗಮವಾಗಿ ನಿರ್ವಹಿಸಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕೆಎಸ್‌ಆರ್‌ಟಿಸಿ ವಿಶೇಷ ಕಾರ್ಯಯೋಜನೆ ಹಾಕಿಕೊಂಡಿದೆ.
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್), ಮೈಸೂರು ರಸ್ತೆ ಬಸ್ ನಿಲ್ದಾಣ, ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣಗಳಿಂದ ರಾಜ್ಯದ ನಾನಾ ಜಿಲ್ಲಾ ಕೇಂದ್ರಗಳಿಗೆ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗಿದೆ. ಹಬ್ಬದ ನಂತರ ಮತ್ತೆ ಬೆಂಗಳೂರಿಗೆ ಮರಳುವವರರಿಗೂ ಬಸ್‌ಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಈ ವಿಶೇಷ ಬಸ್ ಗಳು ಅಕ್ಟೋಬರ್ 22 ಮತ್ತು 26ರಂದು ನಾನಾ ಜಿಲ್ಲಾ ಕೇಂದ್ರಗಳಿಂದ ಬೆಂಗಳೂರಿಗೆ ಬರಲಿವೆ.
ಕೆಎಸ್‌ಆರ್‌ಟಿಸಿ ಮುಂಗಡ ಟಿಕೆಟ್ ಬುಕಿಂಗ್ ವ್ಯವಸ್ಥೆ ಕಲ್ಪಿಸಿದೆ. ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್ಸೈಟ್ www.ksrtc.karnataka.gov.in ಗೆ ಭೇಟಿ ನೀಡಿ ಬಸ್ ಟಿಕೆಟ್‌ಗಳನ್ನು ಮುಂಚಿತವಾಗಿ ಕಾಯ್ದಿರಿಸಿಕೊಳ್ಳಬಹುದು. ವೆಬ್ಸೈಟ್ ಮೂಲಕ ಬಸ್‌ಗಳ ಕಾರ್ಯಾಚರಣೆ ಮತ್ತು ವೇಳಾಪಟ್ಟಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪಡೆಯಬಹುದು. ಮುಂಗಡ ಬುಕ್ಕಿಂಗ್‌ಗೆ ಶೇ. 5 ರಿಂದ 10 ರಷ್ಟು ರಿಯಾಯಿತಿ ನೀಡಲಾಗುತ್ತಿದೆ.