ಶಿವಮೊಗ್ಗ: ಭದ್ರಾವತಿಯ ಗೋಂದಿ ಕೈಮರದಲ್ಲಿ ದರೋಡೆಗೆ ಸಂಚು ಹಾಕುತ್ತಿದ್ದ ಐವರು ಆರೋಪಿಗಳಿಗೆ 10 ವರ್ಷ ಕಠಿಣ ಶಿಕ್ಷೆ ಮತ್ತು 50 ಸಾವಿರ ದಂಡ ವಿಧಿಸಿ ಭದ್ರಾವತಿಯ ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಶಿವಮೊಗ್ಗ ನವರದ ಆರೋಪಿತರಾದ ಇಮ್ರಾನ್ ಷರೀಫ್, ಅಬೀದ್ ಖಾನ್, ಮುಜಾಹಿದ್, ಹನೀಫುಲ್ಲಾ ಖಾನ್, ನಸ್ರುಲ್ಲಾ ಎಂಬ ಆರೋಪಿಗಳಿಗೆ 10 ವರ್ಷ ಕಠಿಣ ಸಜೆ ಮತ್ತು ತಲಾ 50,000 ರೂ ದಂಡ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.
2019 ಫೆಬ್ರವರಿ 1 ರಂದು ರಾತ್ರಿ ಸಮಯದಲ್ಲಿ ಗೋಂದಿ ಕೈಮರದ ಬಳಿ ಹೋಗಿ ಮರೆಯಲ್ಲಿ ನಿಂತು ನೋಡಿದ ಭದ್ರಾವತಿ ಗ್ರಾಮಾಂತರ ಪೊಲೀಸರಿಗೆ, 5 ಜನ ಆರೋಪಿತರು ಮರದದೊಣ್ಣೆ, ಕಬ್ಬಿಣದ ಚಾಕು, ಖಾರದ ಪುಡಿ ಮತ್ತು ಸ್ಟೀಲ್ ರಾಡುಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಹೋಗಿ ಬರುತ್ತಿದ್ದ ವಾಹನಗಳನ್ನು ಅಡ್ಡಹಾಕಲು ಪ್ರಯತ್ನಿಸುತ್ತಿದ್ದರು.
ನಂತರ ಅವರನ್ನು ಹಿಡಿದುಕೊಳ್ಳಲು ದಾಳಿ ಮಾಡಿದ್ದು, ಅದರಲ್ಲಿ ಒಬ್ಬ ಓಡಿ ಹೋಗಿದ್ದು, ಉಳಿದ ಆರೋಪಿತರನ್ನು ಹಿಡಿದುಕೊಂಡು ವಿಚಾರಿಸಲಾಗಿ ದರೊಡೆ ಮಾಡಲು ಹೊಂಚು ಹಾಕುತ್ತಿರುವುದಾಗಿ ತಿಳಿದು ಬಂದಿತ್ತು. ದೊಣ್ಣೆ, ಬಿಳಿ ಪೊಟ್ಟಣ ಕಟ್ಟಿ ಇಟ್ಟುಕೊಂಡಿದ್ದ ಕಾರದ ಪುಡಿ, ಕಬ್ಬಿಣದ ಚಾಕು, ಸ್ಟೀಲ್ ರಾಡ್, ಮರದ ದೊಣ್ಣೆಯನ್ನು ವಶಪಡಿಸಿಕೊಂಡು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಹುಚ್ಚಪ್ಪ ಎಎಸ್ಐ ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ರತ್ನಮ್ಮ ಪಿ. ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದರು. ಭದ್ರಾವತಿಯ ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿ ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ತೀರ್ಪು ನೀಡಿದ್ದಾರೆ.


