ಔರಾದ್ : ಬೀದರ್-ಔರಾದ್ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಚಾಲಕ ಮತ್ತು ನಿರ್ವಾಹಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.
ಔರಾದ್ ಸಾರಿಗೆ ಘಟಕದ ಬಸ್ ಬುಧವಾರ ಮಧ್ಯಾಹ್ನ ಬೀದರನಿಂದ ಔರಾದಗೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ಸುಮಾರು 11:15 ಗಂಟೆಯ ಸಮಯದಲ್ಲಿ ಹೆದ್ದಾರಿ ರಸ್ತೆಯಲ್ಲಿರುವ ಕಪ್ಪೆಕೇರಿ ಕ್ರಾಸ್ ಚಲಿಸುತ್ತಿರುವಾಗ ಇಂಜಿನ್‌ನಲ್ಲಿ ಏಕಾಏಕಿ ದಟ್ಟವಾದ ಹೊಗೆ ಬಂದು ಬಸ್‌ನ ಕೆಳ ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದ್ದೆ.
ಕೂಡಲೇ ಚಾಲಕ ಹಾಗೂ ನಿರ್ವಾಹಕ ಸುಮಾರು 24 ಪ್ರಯಾಣಿಕರನ್ನು ಬಸ್‌ನಿಂದ ಇಳಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಬೆಂಕಿ ಪೂರ್ತಿ ಬಸ್ ಆವರಿಸಿದ್ದರಿಂದ ಆಸನಗಳು ಸೇರಿದಂತೆ ಕೆಲಸ ಸಾಮಗ್ರಿಗಳು ಸಂಪೂರ್ಣ ಸುಟ್ಟು ಹಾನಿಯಾಗಿದೆ. ಸುದ್ದಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಚಲಿಸುವಾಗ ಬಸ್ ನಲ್ಲಿ ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ, ಬಸ್ ಪೂರ್ತಿ ದಟ್ಟ ಹೊಗೆ ಕಾಣಿಸಿಕೊಂಡಿದೆ. ಹೊಗೆ ಕಾಣಿಸಿಕೊಂಡ ತಕ್ಷಣವೇ ಹಿರಿಯ ಚಾಲಕ ಮಾರುತಿರಾವ ಚಿಟಗೀರೆ, ನಿರ್ವಾಹಕ ಬಾಲಾಜಿ ಬಂಡೆ ಪ್ರಯಾಣಿಕರನ್ನು ಕೆಳಗಿಸಿ, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಅವಘಢ ಸಂಭವಿಸಿದ್ದನ್ನು ತಪ್ಪಿಸಿದ್ದಾರೆ ಎಂದು ಘಟಕ ವ್ಯವಸ್ಥಾಪಕ ರಾಜೇಂದ್ರ ತಿಳಿಸಿದ್ದಾರೆ.
ಬಸ್‌ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಕೆಲ ಸಮಯಗಳ ಕಾಲ ಸಂಚಾರ ದಟ್ಟಣೆ ಉಂಟಾಗಿ ಪ್ರಯಾಣಿಕರು ಪರದಾಡಿದರು. ಸ್ಥಳಕ್ಕೆ ವಿಭಾಗೀಯ ಸಾರಿಗೆ ನಿಯಂತ್ರಣ ಅಧಿಕಾರಿ ಚಂದ್ರಕಾಂತ ಫುಲೇಕರ್, ತಹಸೀಲ್ದಾರ ಮಲ್ಲಶೆಟ್ಟಿ ಚಿದ್ರೆ, ಸಿಪಿಐ ರಘುವೀರಸಿಂಗ್ ಠಾಕೂರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.