ಲಕ್ನೋದ ಮೋಹನ್ ಲಾಲ್ ಗಂಜ್ ಪ್ರದೇಶದ ಕಿಸಾನ್ ಪಥದಲ್ಲಿ ದೆಹಲಿಯಿಂದ ಬಿಹಾರಕ್ಕೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಐವರು ಸಜೀವ ದಹನಗೊಂಡಿದ್ದಾರೆ. ಬಸ್‌ನಲ್ಲಿ 60 ಪ್ರಯಾಣಿಕರಿದ್ದರು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣಕ್ಕೆ ಪ್ರಯಾಣಿಕರಿಗೆ ಗಮನಕ್ಕೆ ಬಂದಿಲ್ಲ. ಇದ್ದಕ್ಕಿದ್ದಂತೆ ಹೊಗೆ ತುಂಬಿಕೊಂಡು ಉಸಿರುಗಟ್ಟಿದಾಗ ಕೆಲವು ಪ್ರಯಾಣಿಕರು ನೋಡಿದರೆ ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಗಿದೆ. ಆತಂಕಗೊಂಡ ಪ್ರಯಾಣಿಕರು ಕಿಟಕಿ ಗಾಜು ಹೊಡೆದು ಹೊರ ಬರಲು ಆಗಲು ಪ್ರಯತ್ನಿಸಿದ್ದಾರೆ. ಬೆಂಕಿ ಹೊತ್ತಿಕೊಂಡಿರುವುದು ನೋಡುತ್ತಿದ್ದಂತೆ ಸುತ್ತಮುತ್ತಲಿನ ಜನ ನೆರವಿಗೆ ಧಾವಿಸಿದ್ದಾರೆ, ಸ್ಥಳೀಯರು ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೂ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ರಕ್ಷಣಾ ತಂಡ ಅಗ್ನಿ ನಂದಿಸಲು ಪ್ರಯತ್ನಿಸುವಷ್ಟರಲ್ಲಿ ಇಡೀ ಬಸ್ ಸುಟ್ಟು ಹೋಗಿತ್ತು.
ಈ ದುರಂತದಲ್ಲಿ 5 ಪ್ರಯಾಣಿಕರು ಸಜೀವ ದಹನವಾಗಿದ್ದು, ಇನ್ನೂ ಗುರುತು ಪತ್ತೆಯಾಗಿಲ್ಲ. ಇತರ ಪ್ರಯಾಣಿಕರನ್ನು ಸಕಾಲದಲ್ಲಿ ಬಸ್ಸಿನಿಂದ ಇಳಿಸಲಾಗಿದೆ.
ಪ್ರತ್ಯಕ್ಷದರ್ಶಿಗಳು ಹೇಳುವಂತೆ, ಬಸ್ ಚಾಲಕ ಮೊದಲು ಗಾಜು ಒಡೆದು ಬಸ್ಸಿನಿಂದ ಜಿಗಿದು ಪರಾರಿಯಾಗಿ ಕಾಣೆಯಾಗಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪಘಾತದ ಕಾರಣಗಳ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ದುರಂತ ಸಂಭವಿಸಿದೆ ಬೆಂಕಿಗೆ ಕಾರಣ ಎಂದು ಹೇಳಲಾಗುತ್ತಿದೆ.