ಮಾಜಿ ಸಚಿವರಾದ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಅವರಿಗೆ ಸೇರಿದ ಮಾಡೆಲ್ ಹೌಸ್ ಗೆ ಕಿಡಿಗೇಡಿಗಳು ಬೆಂಕಿ ಹಾಕಿದ ಘಟನೆ ಶನಿವಾರ ನಡೆದಿದೆ.
ಶುಕ್ರವಾರ ಸಂಜೆ ಬಳ್ಳಾರಿಯ ಜಿ ಸ್ಕ್ವೇರ್ ಲೇಔಟ್ ನಲ್ಲಿರುವ ಮಾಡೆಲ್ ಹೌಸ್ ಗೆ ಬೆಂಕಿ ಬಿದ್ದಿದ್ದು ಅಪಾರ ನಷ್ಟವುಂಟಾಗಿದೆ.
ಸಂಜೆ 6.30ರ ಸುಮಾರಿಗೆ ಆಟೋದಲ್ಲಿ ಬಂದ ಕಿಡಿಗೇಡಿಗಳು ಮಾಡೆಲ್ ಹೌಸ್ ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಇದರಿಂದ ಮನೆಯ ಬಾಗಿಲು ಹಾಗೂ ಮನೆಯೊಳಗೆ ಇದ್ದ ಪೀಠೋಪಕರಣಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಹಾನಿಯಾಗಿಲ್ಲ.
ಮಾಡೆಲ್ ಹೌಸ್ ಗೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಅವರ ಬೆಂಬಲಿಗರೇ ಬೆಂಕಿ ಹಚ್ಚಿದ್ದಾರೆ ಎಂದು ಬಿಜೆಪಿ ಮುಖಂಡ ಸೋಮಶೇಖರ್ ರೆಡ್ಡಿ ಆರೋಪಿಸಿದ್ದಾರೆ.
ಇತ್ತೀಚೆಗಷ್ಟೇ ಬ್ಯಾನರ್ ವಿಷಯದಲ್ಲಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಗುಂಡಿಗೆ ಬಲಿಯಾಗಿದ್ದರು. ಈ ಘಟನೆ ಬೆನ್ನಲ್ಲೇ ಮಾಡೆಲ್ ಹೌಸ್ ಗೆ ಬೆಂಕಿ ಬಿದ್ದಿರುವುದು ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿದೆ.
ನಾವು ಇದನ್ನು ಇಲ್ಲಿಗೆ ಬಿಡಲ್ಲ. ಪೊಲೀಸರಿಗೆ ದೂರು ನೀಡುತ್ತೇವೆ. ಸಂಜೆ ವೇಳೆ 15 ಜನ ಬಂದ ದುಷ್ಕರ್ಮಿಗಳು ಗಾಜು ಒಡೆದು ಒಳಗೆ ಬಂದಿದ್ದು, ಪೆಟ್ರೋಲ್, ಡೀಸೆಲ್ ಹಾಕಿ ಸುಟ್ಟು ಹಾಕಿದ್ದಾರೆ.
ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಜನ ಸಂಪರ್ಕಕ್ಕಾಗಿ ಮಾಡೆಲ್ ಹೌಸ್ ನಿರ್ಮಿಸಲಾಗಿದ್ದು, ಇಲ್ಲಿ ಸಾಮಾನ್ಯವಾಗಿ ಯಾರೂ ಇರುವುದಿಲ್ಲ. ಅಲ್ಲದೇ ಸಿಸಿಟಿವಿ ಇಲ್ಲ. ಆದರೆ ಫೋಟೊಗಳು ಲಭ್ಯವಾಗಿದ್ದು, ಬ್ಯಾನರ್ ಗಲಾಟೆಯಲ್ಲಿ ಇದ್ದ ವ್ಯಕ್ತಿಗಳು ಇದ್ಧಾರೆ ಎಂದು ಸೋಮಶೇಖರ್ ರೆಡ್ಡಿ ಆರೋಪಿಸಿದ್ದಾರೆ.
ಸುಮಾರು 100 ಎಕರೆ ಪ್ರದೇಶದಲ್ಲಿ ಲೇಔಟ್ ನಿರ್ಮಿಸಲಾಗುತ್ತಿದೆ. ಖರೀದಿದಾರರಿಗೆ ತೋರಿಸಲು ಮಾದರಿಯಾಗಿ ಈ ಮಾಡೆಲ್ ಮನೆ ನಿರ್ಮಿಸಲಾಗಿತ್ತು. ಭರತ್ ರೆಡ್ಡಿ ಬ್ಯಾನರ್ ಗಲಾಟೆ ಸಂದರ್ಭದಲ್ಲಿ ಬೆಂಕಿ ಹಚ್ಚುತ್ತೇನೆ ಎಂದು ಹೇಳಿದಂತೆ ಮಾಡಿಸಿದ್ದಾರೆ ಎಂದು ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.


