ಶಾಸಕ ಜನಾರ್ದನ ರೆಡ್ಡಿಗೆ ಸೇರಿದ ಬಳ್ಳಾರಿಯ ಜಿ ಸ್ಕೈರ್ ಲೇಔಟ್ನಲ್ಲಿರುವ ಮಾಡೆಲ್ ಹೌಸ್ ಗೆ ಬೆಂಕಿ ಹಾಕಿದ ಪ್ರಕರಣದಲ್ಲಿ ಬಾಲಕರೂ ಸೇರಿದಂತೆ 8 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ಅಗ್ನಿ ಅವಘಡದ ಪ್ರಕರಣದಲ್ಲಿ 8 ಮಂದಿಯನ್ನು ವಶಕ್ಕೆ ಪಡೆದಿದ್ದು, ಇದರಲ್ಲಿ ಕೆಲವರು ಅಪ್ರಾಪ್ತರಿದ್ದಾರೆ ಎಂದು ಶನಿವಾರ ಬಳ್ಳಾರಿ ವಲಯ ಐಜಿಪಿ ಡಾ. ಪಿ.ಎಸ್ ಹರ್ಷ ತಿಳಿಸಿದ್ದಾರೆ.
ಬಂಧಿತರ ವಯಸ್ಸಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ. ವಿಚಾರಣೆ ಪೂರ್ಣಗೊಂಡ ಬಳಿಕ ಇತರ ಮಾಹಿತಿಯನ್ನು ತಿಳಿಸಲಾಗುವುದು” ಎಂದು ಅವರು ಹೇಳಿದರು.
ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಸೈಟ್ ಎಂಜಿನಿಯರ್ ರಿಜ್ವಾನ್ ನೀಡಿದ ದೂರಿನ ಮೇರೆಗೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 8 ರಿಂದ 10 ಜನ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಮನೆಯಲ್ಲಿದ್ದ 1 ಕೋಟಿ 25 ಲಕ್ಷ ಮೌಲ್ಯದ ಪರಿಕರಗಳು ನಷ್ಟವಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
”ಅಪರಿಚಿತ ವ್ಯಕ್ತಿಗಳು ಬೆಂಕಿ ಹಚ್ಚಿದ್ದಾರೆ ಎಂದು ಶುಕ್ರವಾರ ರಾತ್ರಿ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನಾ ಸ್ಥಳಕ್ಕೆ ಎಫ್ಎಸ್ಎಲ್ ತಂಡ ತೆರಳಿ ಪರಿಶೀಲನೆ ಮಾಡಲಿದೆ.
ಘಟನೆ ಸಂಬಂಧ ಎಂಟು ಜನರನ್ನು ವಶಕ್ಕೆ ಪಡೆದಿದ್ದೇವೆ. ಅವರಲ್ಲಿ ಆರು ಮಂದಿ ಅಪ್ರಾಪ್ತರು ಹಾಗೂ ಇಬ್ಬರು ವಯಸ್ಕರಿದ್ದಾರೆ. ರಿಲ್ಸ್, ಪೋಟೋ ಶೂಟ್‌ಗೆ ಸಂಬಂಧಿಸಿದಂತೆ ಈ ಮನೆಗೆ ಭೇಟಿ ನೀಡಿದ್ದರು ಅಂತ ಮಾಹಿತಿ ಸಿಕ್ಕಿದೆ. ಪೋಟೋ ಶೂಟ್‌ಗಾಗಿ ಮಾಡೆಲ್ ಹೌಸ್ನ ಮೊದಲ ಮಹಡಿಗೆ ಹೋಗಿದ್ದಾರೆ. ಸಿಗರೇಟ್ ವಿಚಾರವಾಗಿ ಬೆಂಕಿ ತಾಗಿರುವ ಶಂಕೆ ಇದೆ. ಆರೋಪಿತರಲ್ಲಿ ಇಬ್ಬರು ಮುಂಬೈಯಿಂದ ಬಂದವರಿದ್ದಾರೆ. ಇವರು ಯಾರೂ ರಾಜಕೀಯ ಹಿನ್ನೆಲೆಯನ್ನು ಹೊಂದಿಲ್ಲ. ಇನ್ನೂ ಹೆಚ್ಚಿನ ಪರಿಶೀಲನೆ ಮಾಡಲಾಗುವುದು” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೇಕರ್ ಮಾಹಿತಿ ನೀಡಿದ್ದಾರೆ.
ಶುಕ್ರವಾರ ರಾತ್ರಿ, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಪ್ರತಿಕ್ರಿಯಿಸಿದ್ದ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ನಮ್ಮ ತಾಯಿಯ ಹೆಸರಲ್ಲಿ ಲೇಔಟ್ ಮಾಡಿದ್ದೆವು. ಇಲ್ಲಿ ಜನರಿಗೆ ತೋರಿಸುವುದಕ್ಕಾಗಿ ಮಾಡೆಲ್ ಹೌಸ್ ಕಟ್ಟಿಸಿದ್ದೆವು. ಈ ಮನೆಗೆ ಡಿಸೇಲ್, ಪೆಟ್ರೋಲ್ ಹಾಕಿ 10-15 ಜನರು ಬೆಂಕಿ ಹಚ್ಚಿದ್ದಾರೆ. ಪರಿಣಾಮ ಮನೆಯಲ್ಲಿನ ಎಲ್ಲ ಪಿಠೋಪಕರಣಗಳು ಸುಟ್ಟು ಹೋಗಿವೆ. ಎಲ್ಲ ಗ್ಲಾಸ್ ಪುಡಿಪುಡಿಯಾಗಿವೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ’ ಎಂದು ಹೇಳಿದ್ದರು.


