Menu

ಜೈಪುರ ಆಸ್ಪತ್ರೆಯಲ್ಲಿ ಬೆಂಕಿ: ಎಂಟು ರೋಗಿಗಳು ಸಜೀವ ದಹನ

ಜೈಪುರದ ಸವಾಯಿ ಮಾನ್ ಸಿಂಗ್ ಸರ್ಕಾರಿ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಬೆಂಕಿ ಹೊತ್ತಿಕೊಂಡು ಎಂಟು ರೋಗಿಗಳು ಸಜೀವ ದಹನವಾಗಿ ಹೋಗಿರುವ ದಾರುಣ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದ್ದು, ಐವರ ಸ್ಥಿತಿ ಗಂಭೀರವಾಗಿದ್ದು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಎರಡು ಐಸಿಯುಗಳಿದ್ದವು. ಒಂದರಲ್ಲಿ 11 ರೋಗಿಗಳು, ಮತ್ತೊಂದರಲ್ಲಿ 13 ರೋಗಿಗಳಿದ್ದರು ಎನ್ನಲಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಾಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮಹಿಳೆಯರು ಮತ್ತು ನಾಲ್ವರು ಪುರುಷ ಸೇರಿ ಎಂಟು ರೋಗಿಗಳು ಮೃತಪಟ್ಟಿದ್ದಾರೆ. ಐವರ ಸ್ಥಿತಿ ಗಂಭೀರವಾಗಿದೆ ಎಂದು ಟ್ರಾಮಾ ಸೆಂಟರ್ ಉಸ್ತುವಾರಿ ಡಾ.ಅನುರಾಗ್ ಧಾಕಡ್ ತಿಳಿಸಿದ್ದಾರೆ.

ಆಸ್ಪತ್ರೆಯ ದಾಖಲೆ ಪತ್ರಗಳು, ಐಸಿಯು ಉಪಕರಣಗಳು, ಲ್ಯಾಬ್ ಬೆಂಕಿಯಲ್ಲಿ ಸುಟ್ಟು ಹೋಗಿವೆ. ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಗಳು ಮತ್ತು ರೋಗಿಗಳ ಕುಟುಂಬಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಕಳಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಧಾವಿಸಿ 2 ಗಂಟೆ ಕಾರ್ಯಚರಣೆ ಬಳಿಕ ಬೆಂಕಿ ನಂದಿಸಿದೆ.

ಆಸ್ಪತ್ರೆಯಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಆಸ್ಪತ್ರೆಯ ಸಿಬ್ಬಂದಿಯು ರೋಗಿಗಳ ರಕ್ಷಣೆಗೆ ಮುಂದಾಗುವ ಬದಲು  ಸ್ಥಳದಿಂದ ಓಡಿಹೋಗಿದ್ದಾರೆಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.

Related Posts

Leave a Reply

Your email address will not be published. Required fields are marked *