ಬೆಂಗಳೂರಿನಲ್ಲಿ ಕಿರುತೆರೆ ಕಲಾವಿದರಿಗೆ ಸೈಟ್ ಕೊಡಿಸುವುದಾಗ ನಂಬಿಸಿ 1.6 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆಂದು ಬಿಲ್ಡರ್ ಸೇರಿದಂತೆ ಐವರು ಆರೋಪಿಗಳ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಭಗೀರಥ , ಸಂಜೀವ್ ತಗಡೂರು, ಗುರುಪ್ರಸಾದ್, ರವೀಂದ್ರ, ಮತ್ತು ಉಮಾಕಾಂತ್ ಎಂಬವರು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ (ಕೆಟಿವಿಎ) ಸದಸ್ಯರಾದ 139 ಕಿರುತೆರೆ ನಟ-ನಟಿಯರಿಗೆ ಈ ವಂಚನೆ ಎಸಗಿದ್ದಾರೆ. ಭಾವನ ಬೆಳಗೆರೆ ಈ ಸಂಬಂಧ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸೈಟ್ಗಳನ್ನು ಕೊಡಿಸುವ ಭರವಸೆಯೊಂದಿಗೆ 2015ರಲ್ಲಿ ಈ ಆರೋಪಿಗಳು ಕಿರುತೆರೆ ಕಲಾವಿದರಿಂದ 1.6 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ. ಸೈಟ್ಗಳನ್ನು ಒದಗಿಸದೆ ವಂಚನೆ ಮಾಡಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ.
2015ರಲ್ಲಿ ಸಂಜೀವ್ ತಗಡೂರು, ಕೆಟಿವಿಎ ಸೈಟ್ ಕಮಿಟಿಯ ಸದಸ್ಯರಾಗಿದ್ದಾಗ ಈ ಯೋಜನೆಯನ್ನು ಆರಂಭಿಸಿದ್ದರು. ಕಿರುತೆರೆ ಕಲಾವಿದರಿಗೆ ಕಡಿಮೆ ದರದಲ್ಲಿ ಸೈಟ್ಗಳನ್ನು ಒದಗಿಸುವ ಭರವಸೆಯೊಂದಿಗೆ ಭಗೀರಥ ಎಂಬ ಬಿಲ್ಡರ್ನೊಂದಿಗೆ ವ್ಯವಹಾರ ಆರಂಭಿಸಿದ್ದರು. ಕೆಟಿವಿಎ ಸದಸ್ಯರಿಂದ ದೊಡ್ಡ ಮೊತ್ತ ಸಂಗ್ರಹಿಸಲಾಗಿತ್ತು. ವರ್ಷಗಳೇ ಕಳೆದರೂ ಸೈಟ್ಗಳನ್ನು ನೀಡಿಲ್ಲ, ಈ ವಂಚನೆಯಿಂದ 139 ಕಲಾವಿದರು ಆರ್ಥಿಕವಾಗಿ ನಷ್ಟ ಅನುಭವಿಸಿದ್ದಾರೆ. ನೊಂದ ಕೆಟಿವಿಎ ಸದಸ್ಯರು ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.