ರಾಜ್ಯದಲ್ಲಿರುವ ಒಟ್ಟು ಜಲಮೂಲಗಳ ನಿಖರವಾದ ಸಂಖ್ಯೆಯನ್ನು ಅಂತಿಮಗೊಳಿಸಿ, ಇಲಾಖಾವಾರು ವರ್ಗೀಕರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಗಳಾದ ಬಿ.ಕೆ. ಪವಿತ್ರ, ಭೂಮಾಪನ ಇಲಾಖೆ (SSLR), ಕರ್ನಾಟಕ ರಾಜ್ಯ ದೂರಸಂವೇದಿ ಅಪ್ಲಿಕೇಶನ್ ಕೇಂದ್ರ (KSRAC), ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (KCST) ಹಾಗೂ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ (KTCDA) ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆದೇಶಿಸಿದರು.
ರಾಜ್ಯದಲ್ಲಿ ವಿವಿಧ ಇಲಾಖೆಗಳ ಮಾಲೀಕತ್ವದಲ್ಲಿ ಸುಮಾರು 41849 ಜಲಮೂಲಗಳ ಬಗ್ಗೆ ಇಲಾಖೆಗಳ ಮಧ್ಯೆ ಬಹಳಷ್ಟು ಗೊಂದಲವಿದೆ. ಹಲವಾರು ಕೆರೆಗಳು/ಜಲಮೂಲಗಳ ಮಾಲೀಕತ್ವದ ಬಗ್ಗೆಯೂ ಗೊಂದಲವಿದೆ. ಇದರಿಂದಾಗಿ ಈ ಜಲಮೂಲಗಳ ಅಸ್ತಿತ್ವ ಹಾಗೂ ಅವುಗಳ ಸಮಪರ್ಕ ನಿರ್ವಹಣೆಯ ಕಾರ್ಯದಲ್ಲಿ ತೊಡಕಾಗುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಮೊದಲು ರಾಜ್ಯದಲ್ಲಿರುವಂತಹ ಕೆರೆ/ಜಲಮೂಲಗಳ ಸಂಖ್ಯೆಗಳ ಬಗ್ಗೆ ನಿಖರವಾದ ದತ್ತಾಂಶ ಕ್ರೋಢೀಕರಣ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಅಂತರ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚನೆ ನೀಡಿದರು.
ಸಭೆಯ ಪ್ರಮುಖ ನಿರ್ಣಯಗಳು
ಕೆರೆ/ಜಲಮೂಲಗಳ ಒಟ್ಟು ಸಂಖ್ಯೆ ಅಂತಿಮಗಳಿಸುವುದು: ರಾಜ್ಯದಲ್ಲಿರುವ ಒಟ್ಟು ಕೆರೆಗಳ ಸಂಖ್ಯೆಯ ಬಗ್ಗೆ ಗೊಂದಲ ನಿವಾರಿಸಲು, ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಕೆರೆಗಳ ಒಟ್ಟು ಸಂಖ್ಯೆಯನ್ನು ಅಂತಿಮಗೊಳಿಸಬೇಕು. ಇದು ಕೆರೆಗಳ ಸಂರಕ್ಷಣೆ ಮತ್ತು ಒತ್ತುವರಿ ತಡೆಯಲು ಸಹಕಾರಿಯಾಗಲಿದೆ ಎಂದು ಸಚಿವರು ತಿಳಿಸಿದರು.
ಮಾಲೀಕತ್ವದ ಆಧಾರದಲ್ಲಿ ವರ್ಗೀಕರಣ: ಅಂತಿಮಗೊಂಡ ಕೆರೆಗಳನ್ನು ಯಾವ ಇಲಾಖೆಯ ವ್ಯಾಪ್ತಿಗೆ (ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಅಥವಾ ಇತರೆ) ಬರುತ್ತವೆ ಎಂಬುದರ ಆಧಾರದ ಮೇಲೆ ಸ್ಪಷ್ಟವಾಗಿ ವಿಂಗಡಣೆ (Bifurcation) ಮಾಡಬೇಕು. ಇದರಿಂದ ನಿರ್ವಹಣೆಯ ಹೊಣೆಗಾರಿಕೆಯನ್ನು ನಿಗದಿಪಡಿಸಲು ಸಾಧ್ಯವಾಗುತ್ತದೆ.
30% ಕ್ಕಿಂತ ಕಡಿಮೆ ನೀರಿರುವ ಕೆರೆಗಳ ಮಾಹಿತಿ: ರಾಜ್ಯದ ಯಾವ ಕೆರೆಗಳಲ್ಲಿ ಪ್ರಸ್ತುತ ಶೇ.30 ಕ್ಕಿಂತ ಕಡಿಮೆ ನೀರಿನ ಸಂಗ್ರಹವಿದೆ ಎಂಬುದರ ಕುರಿತು ತ್ವರಿತವಾಗಿ ವರದಿ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಈ ಮಾಹಿತಿಯ ಆಧಾರದ ಮೇಲೆ ಮುಂದಿನ ಅಭಿವೃದ್ಧಿ ಕಾರ್ಯಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ಈ ಕಾರ್ಯದಲ್ಲಿ ಕೆ.ಎಸ್.ಆರ್.ಎ.ಸಿ (KSRAC) ಮತ್ತು ಕೆ.ಸಿ.ಎಸ್.ಟಿ (KCST) ಸಂಸ್ಥೆಗಳು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಸಚಿವರು ನಿರ್ದೇಶನ ನೀಡಿದರು.


