ಹಾಸನ ತಾಲೂಕಿನ ಕೆಲವತ್ತಿ ಗ್ರಾಮದಲ್ಲಿ ಯುವತಿಯೊಬ್ಬಳು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಮೃತ ಯುವತಿ ೨೧ ವರ್ಷದ ಕವನ ಅಂತಿಮ ವರ್ಷದ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದಳು.
ರಾಜ್ಯದಲ್ಲಿ ಇತ್ತೀಚೆಗೆ ಯುವ ಸಮೂಹದಲ್ಲಿ ಹೃದಯಾಘಾತದಿಂದ ಸಾವಿನ ಸಂಖ್ಯೆ ವರದಿಯಾಗುತ್ತಲೇ ಇದೆ. ನಿಂತಲ್ಲ, ಕುಳಿತಲ್ಲಿ, ಕರ್ತವ್ಯದಲ್ಲಿ, ನೃತ್ಯದಲ್ಲಿ ತೊಡಗಿರವಾಗಲೇ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಳ್ಳುತ್ತಿರುವ ಸುದ್ದಿಗಳು ಆತಂಕ ಹುಟ್ಟಿಸುತ್ತವೆ. ಈ ಪಟ್ಟಿಗೆ ಹಾಸನದ ಪದವಿ ಓದುತ್ತಿರುವ ಯುವತಿ ಕೂಡ ಸೇರಿದ್ದಾಳೆ.
ಪಾಪಣ್ಣ ಹಾಗೂ ಗಾಯತ್ರಿ ಎಂಬವರ ಮಗಳು ಕವನ ಸಂಜೆ ಮನೆಗೆ ನೀರು ತಂದ ಬಳಿಕ ದಿಢೀರ್ ಎದೆನೋವು ಕಾಣಿಸಿಕೊಂಡಿದೆ. ಆಗ ಕವನ ತಾಯಿ ಬಳಿ ಕುಡಿಯಲು ನೀರು ಕೇಳಿದ್ದಾಳೆ. ತಾಯಿ ನೀರು ತಂದು ಕೊಡುವಷ್ಟರಲ್ಲಿ ಕವನ ಮನೆಯಲ್ಲಿಯೇ ಕುಸಿದು ಬಿದ್ದು ಅಸು ನೀಗಿದ್ದಾಳೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಳು.