ಮಹಾರಾಷ್ಟ್ರದ ಧುಲೆ ಜಿಲ್ಲೆಯ ಸಾಕ್ರಿ ತಾಲೂಕಿನ ಪಿಂಪಳ್ನರ್ ಗ್ರಾಮದಲ್ಲಿ ಮದುವೆ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸಿಲ್ಲ ಎಂಬ ಕಾರಣಕ್ಕೆ ಮದುವೆ ಮನೆಯಲ್ಲಿ ಶುರುವಾದ ಜಗಳ ಮೂವರ ಕೊಲೆಯಲ್ಲಿ ಅಂತ್ಯ ಕಂಡಿದೆ. ದೇವೇಂದ್ರ ಜ್ಞಾನೇಶ್ವರ ಪವಾರ್ (35), ಸುರೇಶಗೀರ್ ಮೋಜಗೀರ್ ಗೋಸಾವಿ (55) ಮತ್ತು ಸಾಹಿಲ್ ಸುರೇಶ್ ಗೋಸಾವಿ (35) ಮೃತಪಟ್ಟವರು.
ಮಹಾರಾಷ್ಟ್ರದ ಧುಲೆ ಜಿಲ್ಲೆಯ ಸಾಕ್ರಿ ತಾಲೂಕಿನ ಪಿಂಪಳ್ನರ್ ಗ್ರಾಮದ ಮದುವೆ ಸಮಾರಂಭದಲ್ಲಿ ಈ ದುರಂತ ಸಂಭವಿಸಿದೆ. ನೀಲಕಂಠ ನಗರದಲ್ಲಿ ಗೋಸಾವಿ ಸಮುದಾಯದ ಮದುವೆಯಲ್ಲಿ ಎರಡು ಗುಂಪುಗಳ ನಡುವಿನ ವಿವಾದ ಆರಂಭಗೊಂಡು ಚಾಕು ಹಾಗೂ ಇತರ ಆಯುಧಗಳ ಮೂಲಕ ಹಲ್ಲೆಗೆ ತಿರುಗಿ ಮೂವರ ಪ್ರಾಣ ಹೋಗಿದೆ. ಜಗಳದಲ್ಲಿ ಇಬ್ಬರು ಗಂಭೀರವಾಗಿ ಗಾಯ ಗೊಂಡಿದ್ದಾರೆ.
ಮದುವೆಯ ಹಲ್ದಿ ಸಮಾರಂಭದ ಸಿದ್ಧತೆ ನಡೆಯುತ್ತಿದ್ದಾಗಲೇ ಈ ಘಟನೆ ನಡೆದಿದೆ. ಸಕ್ರಿ ಮತ್ತು ಸೋಂಗಡ್ನಿಂದ ಬಂದ ಸಂಬಂಧಿಕರ ನಡುವೆ ಈಗಾಗಲೇ ಉದ್ವಿಗ್ನತೆ ಇತ್ತು. ವಾಟ್ಸಾಪ್ನಲ್ಲಿ ಆಕ್ಷೇಪಾರ್ಹ ಸಂದೇಶಗಳು, ವೀಡಿಯೊಗಳು ಮತ್ತು ಸ್ಟೇಟಸ್ಗಳನ್ನು ಪ್ರಸಾರ ಮಾಡಿದ್ದರಿಂದ ವಾತಾವರಣ ಮತ್ತಷ್ಟು ಬಿಸಿ ಏರಿತ್ತು. ಲಗ್ನಪತ್ರಿಕೆಯಲ್ಲಿ ಹೆಸರುಗಳ ಬಗ್ಗೆ ಅಸಮಾಧಾನ ಮತ್ತು ಇತರ ವೈಯಕ್ತಿಕ ಕಾರಣಗಳಿಂದ ಈ ಘರ್ಷಣೆ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಗೈದ ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದರು, ಪೊಲೀಸರು ಮತ್ತು ಸ್ಥಳೀಯರು ಗುಜರಾತ್ ಗಡಿ ಪ್ರದೇಶದಲ್ಲಿ ವಶಕ್ಕೆ ಪಡೆದಿದ್ದಾರೆ. ಕಾಂತಿಲಾಲ್ ಗೋಸಾವಿ (42), ಜಸ್ವಂತ್ ಗೋಸಾವಿ (35) ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಘಟನೆಯಿಂದ ಧುಲೆ ಜಿಲ್ಲೆಯಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.


