ಹಾಸನದ ಬೇಲೂರು ತಾಲೂಕಿನ ಹಂಚಿಹಳ್ಳಿ ಗ್ರಾಮದಲ್ಲಿ ದಾರಿ ವಿಚಾರಕ್ಕೆ ಗ್ರಾಮದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ.
ಗ್ರಾಮದ ಗೋವಿಂದಪ್ಪ, ಕುಮಾರ್ ಹಾಗೂ ಇತರರ ಮನೆಗೆ ತೆರಳಲು ದಾರಿ ನಿರ್ಮಾಣ ವಿಚಾರದಲ್ಲಿ ಗಲಾಟೆ ನಡೆದಿದೆ. ಗೋವಿಂದಪ್ಪನ ಸಂಬಂಧಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆಗೆ ಮುಂದಾಗಿರುವುದಾಗಿ ಹಳೆಬೀಡು ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.
ಮಹಿಳೆಯ ಸಂಬಂಧಿ ನೀಡಿದ ದೂರು ಆಧರಿಸಿ ಗಂಗಾಬೋವಿ, ಶಿವಕುಮಾರ್, ಸೋಮ, ಕಿರಣ್, ಆನಂದ್, ಪುನೀತ್, ಪ್ರತಾಪ್, ಪ್ರಸನ್ನ, ನಾಗಾಬೋವಿ, ಮಂಜಾಬೋವಿ ವಿರುದ್ಧ ಪ್ರಕರಣ ದಾಖಲಾಗಿದೆ. ಗಂಗಾಬೋವಿ, ಶಿವಕುಮಾರ್ ಹಾಗೂ ಇತರರು ಮಹಿಳೆ ಮೇಲೆ ಗುಂಪಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆ ಆರೋಪಿಗಳಾದ ಪ್ರತಾಪ್, ಸೋಮ, ಮಂಜಾಬೋವಿ, ಕಿರಣರನ್ನು ಈವರೆಗೂ ಬಂಧನ ಮಾಡಿಲ್ಲ ಎಂದು ಮಹಿಳೆಯ ಸಂಬಂಧಿಕರು ಹಾಸನ ಡಿಸಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಎಂಟು ವರ್ಷದಿಂದ ಬಹಿಷ್ಕಾರ ಹಾಕಲಾಗಿದೆ. ಕುಡಿಯಲು ನೀರು ಕೊಡುತ್ತಿಲ್ಲ, ನಮ್ಮನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, ಜೀವ ಬೆದರಿಕೆ ಹಾಕುತ್ತಿದ್ದಾರೆ. ದೌರ್ಜನ್ಯ ನಡೆಸುತ್ತಿದ್ದು, ರಕ್ಷಣೆ ಕೊಡಿ ಎಂದು ನೊಂದ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಳೆಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


