ಮೈಸೂರಿನಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಮಾಡುತ್ತಿದ್ದ ಗ್ಯಾಂಗ್‌ವೊಂದನ್ನು ಬಯಲಿಗೆಳೆದಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಮಹಿಳೆ ಸೇರಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಬನ್ನೂರಿನ ಪ್ರತಿಷ್ಠಿತ ನರ್ಸಿಂಗ್ ಹೋಂ ಈ ಗ್ಯಾಂಗ್ ಜೊತೆ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು ತಾಲೂಕಿನ ಮೆಲ್ಲಹಳ್ಳಿ ಗ್ರಾಮದ ಬಳಿಯ ಹುನಗನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಐಶಾರಾಮಿ ಬಂಗಲೆಯಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಮಾಡಲಾಗುತ್ತಿತ್ತು. ಇದಕ್ಕಾಗಿ ಮಹಿಳೆಯರಿಂದ ಸಾವಿರಾರು ರೂ. ಪಡೆಯಲಾಗುತ್ತಿತ್ತು. ಲಕ್ಷಾಂತರ ರೂ. ವಹಿವಾಟು ನಡೆಸುತ್ತಿತ್ತು ಎಂಬುದು ಪತ್ತೆಯಾಗಿದೆ.
ಭ್ರೂಣದ ಲಿಂಗ ಪತ್ತೆಗಾಗಿ 25 ಸಾವಿರ ರೂ., ಹೆಣ್ಣು ಭ್ರೂಣವಾದರೆ ಹತ್ಯೆಗೆ 30 ಸಾವಿರ ರೂ. ನಿಗದಿ ಮಾಡಲಾಗಿತ್ತು. ಕೊಠಡಿಯಲ್ಲಿ ಇದ್ದ ಕಬ್ಬಿಣದ ಲಾಕರ್ನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ನಗದು ಪತ್ತೆ ಆಗಿದೆ. ಸ್ಥಳದಲ್ಲಿ ಭ್ರೂಣ ಹತ್ಯೆಗೆ ಬೇಕಾದ ಕಿಟ್‌ಗಳು, ಔಷಧಿಗಳು ಪತ್ತೆಯಾಗಿದ್ದು ವಶಕ್ಕೆ ಪಡೆಯಲಾಗಿದೆ.
ಮಾಹಿತಿ ತಿಳಿದ ರಾಜ್ಯ ಆರೋಗ್ಯ ಇಲಾಖೆ ಡಿಡಿ ವಿವೇಕ್ ದೊರೈ, ಮಂಡ್ಯ ಡಿಹೆಚ್ಒ ಮೋಹನ್ ಹಾಗೂ ಮೈಸೂರು ಡಿಹೆಚ್ಒ ಕುಮಾರಸ್ವಾಮಿ, ಮಂಡ್ಯ ಕುಟಂಬ ಕಲ್ಯಾಣ ಅಧಿಕಾರಿ ಬೆಟ್ಟಸ್ವಾಮಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ವರುಣ ಪೊಲೀಸರ ಸಹಕಾರದೊಂದಿಗೆ ನಡೆಸಿದ ಕಾರ್ಯಾಚರಣೆಯಲ್ಲಿ ಮಹಿಳೆ ಸೇರಿ ಮೂವರು ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.
ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆಗಾಗಿ ಬಳಸುತ್ತಿದ್ದ ವೈದ್ಯಕೀಯ ಪರಿಕರ, ಔಷಧಿಗಳನ್ನು ಮನೆಯ ಮುಂದೆಯೇ ವಿಲೇವಾರಿ ಮಾಡಲಾಗಿದೆ. ಕೆಲವು ವಸ್ತು ಅಲ್ಲೇ ಸುಟ್ಟು ಹಾಕಲಾಗಿತ್ತು. ಸಾಮಾನ್ಯವಾಗಿ ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು, ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ಸುಟ್ಟು ಹಾಕಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.


