ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಗರ್ಭಿಣಿ ಹತ್ಯೆ ಪ್ರಕರಣದಲ್ಲಿ ದೌರ್ಜನ್ಯಕ್ಕೊಳಗಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ವಿವೇಕಾನಂದ ದೊಡ್ಡಮನಿ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್ ಲಾಡ್ ಅವರು, ಸಾಂತ್ವನ ಹೇಳಿ, ಧೈರ್ಯ ತುಂಬಿದರು.
ಗಾಯಾಳುಗಳ ಆರೋಗ್ಯ ಪರಿಸ್ಥಿತಿ ಹಾಗೂ ಚಿಕಿತ್ಸೆ ಕುರಿತು ವೈದ್ಯರಿಂದ ಮಾಹಿತಿ ಪಡೆದು ಉತ್ತಮ ಆರೈಕೆ ಒದಗಿಸಲು ಸೂಚಿಸಿದರು. ಸರಕಾರದಿಂದ ಭದ್ರತೆ, ನೆರವು, ಪರಿಹಾರ ನೀಡುವ ಭರವಸೆ ನೀಡಿದರು. “ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವುದಾಗಿ” ಸಚಿವರು ಹೇಳಿದರು.
ಶಾಸಕರಾದ ಎನ್ ಕೋನರಡ್ಡಿ, ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಅಪರ ಜಿಲ್ಲಾಧಿಕಾರಿ ಗೀತಾ.ಸಿ.ಡಿ, ಡಿಸಿಪಿ ಮಾನಿಂಗ ನಂದಗಾವಿ, ಉಪ ವಿಭಾಗಾಧಿಕಾರಿ ಶಾಲಂ ಹುಸೇನ್, ಎಸಿಪಿ ಶಿಪಪ್ರಕಾಶ ನಾಯ್ಕ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭ ಪಿ., ತಹಶಿಲ್ದಾರರಾದ ಜೆ.ಬಿ.ಮಜ್ಜಗಿ, ಮಹೇಶ ಗಸ್ತಿ, ತಾ.ಪಂ ಇಓ ರಾಮಚಂದ್ರ ಹೊಸಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಇದೇ 21 ರಂದು ಇನಾಂವೀರಾಪುರ ಗ್ರಾಮದಲ್ಲಿ ನಡೆದಿದ್ದ ಮರ್ಯಾದೆ ಹತ್ಯೆ ಪ್ರಕರಣದಲ್ಲಿ ತಂದೆಯೇ ಮಗಳನ್ನು ಬರ್ಬರವಾಗಿ ಕೊಲೆ ಮಾಡಿದ್ದ. ಮೃತ ಮಾನ್ಯ ಪತಿ ಕುಟುಂಬದ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದರು. ಮರೇಪ್ಪ ದೊಡ್ಡಮನಿ, ಸುನೀಲ್ ಹರಿಜನ, ಸಂಗೀತಾ ಹರಿಜನ, ರೇಣವ್ವ, ಅನನ್ಯಾ ದೊಡ್ಡಮನಿ, ಯಲ್ಲಪ್ಪ ದೊಡ್ಡಮನಿ, ಹೂವಮ್ಮ ದೊಡ್ಡಮನಿ ಹಾಗೂ ವಿವೇಕಾನಂದ ದೊಡ್ಡಮನಿ ಅವರು ಗಾಯಗೊಂಡಿದ್ದರು.


