ಚಿಕಿತ್ಸೆ ಕೊಡಿಸಲು ಹಣವಿಲ್ಲವೆಂದು ತಂದೆಯು ವಿಷ ನೀಡಿ ವಿಶೇಷ ಚೇತನ ಮಗುವನ್ನು ಸಾಯಿಸಲು ಮುಂದಾಗಿರುವ ಕ್ರೂರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಿಶೇಷ ಚೇತನ ಮಗನ ಚಿಕಿತ್ಸೆಗಾಗಿ ಅಲೆದು ಬೇಸತ್ತಿದ್ದ ತಂದೆ, ವಿಷ ನೀಡಿ ಸಾಯಿಸಲು ಮುಂದಾಗಿದ್ದು, ಮಗುವೀಗ ಸಾವು -ಬದುಕಿನ ಹೋರಾಟದಲ್ಲಿದೆ.
ಬಾಗಲೂರು ನಿವಾಸಿಗಳಾದ ಸತ್ಯ ಮತ್ತು ಮುನಿಕೃಷ್ಣ ದಂಪತಿಯ ಮಗ ಜೋಯಲ್ ಹುಟ್ಟಿನಿಂದಲೇ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾನೆ. ಮಗುವಿನ ನಿರಂತರ ಚಿಕಿತ್ಸೆ, ಆಸ್ಪತ್ರೆಗಳ ಓಡಾಟ ಮತ್ತು ಹೆಚ್ಚುತ್ತಿರುವ ಖರ್ಚಿನಿಂದ ಮಾನಸಿಕವಾಗಿ ಕುಗ್ಗಿದ್ದ ತಂದೆ ಮುನಿಕೃಷ್ಣ ಈ ಕೃತ್ಯ ಎಸಗಿದ್ದಾಗಿ ಹೇಳಲಾಗಿದೆ.
ಡಿಸೆಂಬರ್ 22ರಂದು ನಡೆದ ಘಟನೆ ನಡೆದಿದೆ. ಮಗುವಿನ ಬಾಯಲ್ಲಿ ನೊರೆ ಕಂಡು ತಾಯಿ ಹಾಗೂ ಅಜ್ಜಿ ಗಾಬರಿ ಆಗಿದ್ದಾರೆ. ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಮಗು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದು ಸ್ಥಿತಿ ಗಂಭೀರವಾಗಿದೆ. ಮಗುವಿನ ತಾಯಿ ಸತ್ಯ ನೀಡಿರುವ ದೂರಿನ ಅನ್ವಯ ಮುನಿಕೃಷ್ಣ ವಿರುದ್ಧ ದೂರು ದಾಖಲಾಗಿದೆ.
ವಿಶೇಷಚೇತನ ನನ್ನ ಮಗನ ಚಿಕಿತ್ಸೆಗೆ ಹಣವಿಲ್ಲ. ವೈದ್ಯರೂ ಕೈಚೆಲ್ಲಿದ್ದರು. ನಾನು ಕೆಲಸಕ್ಕೆ ಹೋಗುವ ಕಡೆ ಗಿಡಗಳಿಗೆ ಔಷಧ ಹೊಡೆಯುತ್ತಿದ್ದರು. ಅವರ ಬಳಿಯಿಂದ ಕೀಟನಾಶಕ ತಂದು ಮಗನ ಆಹಾರಕ್ಕೆ ಹಾಕಿದ್ದೆ. ಆತನ ಚಿಕಿತ್ಸೆಗೆ ಸಾಕಷ್ಟು ಸಾಲ ಮಾಡಿದ್ದೇನೆ ಎಂದು ಆರೋಪಿಯಾಗಿರುವ ಮಗುವಿನ ತಂದೆ ಒಪ್ಪಿಕೊಂಡಿದ್ದಾನೆ.
ನಿಧಿಗಾಗಿ ಮಗು ಬಲಿ ಕೊಡಲು ಮುಂದಾದ ದಂಪತಿ
ನಿಧಿ ಪಡೆಯಬೇಕೆಂಬ ಆಸೆಗೆ ಬಿದ್ದ ದಂಪತಿ ಮಗುವನ್ನು ಬಲಿ ಕೊಡಲು ಮುಂದಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆಯ ಜನತಾ ಕಾಲೋನಿಯಲ್ಲಿ ನಡೆದಿದೆ. ಮನೆಯಲ್ಲಿ ಗುಂಡಿ ತೆಗೆದು ಮಗು ಬಲಿಗಾಗಿ ಪೂಜೆ ಮಾಡಲಾಗುತ್ತಿತ್ತು ಎನ್ನಲಾಗಿದ್ದು, ನಿಖರ ಮಾಹಿತಿ ಆಧಾರದಲ್ಲಿ ದಾಳಿ ನಡೆಸಿದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಗುವನ್ನು ರಕ್ಷಿಸಿದ್ದಾರೆ.
ಸೈಯದ್ ಇಮ್ರಾನ್ ಮನೆಯಲ್ಲಿ ನಿಧಿಗಾಗಿ ಮಗು ಬಲಿ ಪೂಜೆ ನಡೆದಿದ್ದು, ಬೇರೆಯವರಿಂದ ಗಂಡು ಮಗುವನ್ನು ಇವರು ಖರೀದಿಸಿದ್ದರು ಎನ್ನಲಾಗಿದೆ. ಹುಣ್ಣಿಮೆ ಹಿನ್ನೆಲೆ ಮಗು ಬಲಿ ಕೊಡ್ತಿದ್ದಾರೆ ಎಂಬುದಾಗಿ ಸಹಾಯವಾಣಿಗೆ ಅಪರಿಚಿತ ಕರೆ ಬಂದ ಹಿನ್ನೆಲೆ ಅಧಿಕಾರಿಗಳು ದಾಳಿ ನಡೆಸಿ ಮನೆ ಪರಿಶೀಲನೆ ಮಾಡಿದ್ದಾರೆ. ಮನೆಯ ಕೋಣೆಯೊಂದರಲ್ಲಿ ಗುಂಡಿ ತೆಗೆದು ಪೂಜೆ ನಡೆಸುತ್ತಿರುವುದು ಪತ್ತೆಯಾಗಿದೆ. ಎಂಟು ತಿಂಗಳ ಮಗುವನ್ನು ರಕ್ಷಿಸಿದ ಅಧಿಕಾರಿಗಳು ಶಿಶು ಕೇಂದ್ರಕ್ಕೆ ರವಾನಿಸಿದ್ದಾರೆ. ಮಕ್ಕಳ ರಕ್ಷಣಾ ಕಲ್ಯಾಣ ಸಮಿತಿಯಿಂದ ತನಿಖೆ ನಡೆಯುತ್ತಿದೆ.
ಎಂಟು ತಿಂಗಳ ಹಿಂದೆ ಕೂಲಿ ಕಾರ್ಮಿಕರಿಂದ ಸೈಯದ್ ಇಮ್ರಾನ್ ಮಗು ದತ್ತು ಪಡೆದುಕೊಂಡಿದ್ದ. ನಕಲಿ ಜನನ ಪ್ರಮಾಣ ಪತ್ರವನ್ನು ಸೈಯದ್ ಇಮ್ರಾನ್ ಮತ್ತು ಆತನ ಪತ್ನಿ ಮಾಡಿಸಿಕೊಂಡಿದ್ದರು. ಮಗು ದತ್ತು ಪಡೆದು ಕರಾರು ಮಾಡಿಕೊಂಡಿರುವುದಾಗಿ ದಂಪತಿ ಅಧಿಕಾರಿಗಳಿಗೆ ಪತ್ರ ನೀಡಿದ್ದಾರೆ.


