ಧಾರವಾಡದ ಸಂತೋಷ್ ನಗರದಲ್ಲಿ ಮನೆಯಲ್ಲಿ ಕಳೆದ ಶುಕ್ರವಾರ ಥಿನ್ನರ್ ಬಾಟಲಿ ಜಾರಿ ಬಿದ್ದು ಮಗು ಮೃತಪಟ್ಟ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ತಂದೆಯೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ.
ಚಂದ್ರಕಾಂತ್ ಮಾಶ್ಯಾಳ ಮೃತಪಟ್ಟವರು. ಬೆಂಕಿ ಕಾಯಿಸಿಕೊಳ್ಳಲೆಂದು ಕುಪ್ಪಡಿ ಇಟ್ಟಿದ್ದ ಮನೆಯಲ್ಲಿ ಆಟವಾಡುತ್ತಿದ್ದ 4 ವರ್ಷದ ಅಗಸ್ತ್ಯ ಥಿನ್ನರ್ ಬಾಟಲಿಯನ್ನು ಬೀಳಿಸಿದ್ದ. ಈ ವೇಳೆ ಥಿನ್ನರ್‌ಗೆ ಬೆಂಕಿ ತಗುಲಿದ್ದು ಬೆಂಕಿಯ ಕೆನ್ನಾಲಿಗೆಗೆ ಬಾಲಕನ ದೇಹ ಸುಟ್ಟು ಹೋಗಿತ್ತು.
ಮಗನನ್ನು ಬೆಂಕಿಯಿಂದ ರಕ್ಷಿಸಲು ಹೋಗಿದ್ದ ಚಂದ್ರಕಾಂತ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಮತ್ತು ಮಗುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಅಷ್ಟರಲ್ಲಾಗಲೇ ಮಗು ಅಗಸ್ತ್ಯ ಮೃತಪಟ್ಟಿದ್ದ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಂದ್ರಕಾಂತ್ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ.