ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿ ಅಪ್ಪನೇ ತನ್ನ ಮಗನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಪ್ರದೀಪ್ ಆಚಾರ್ (29) ಕೊಲೆಯಾದವರು. ರಮೇಶ್ ಆಚಾರ್ ಮಗನ ಕೊಲೆಗೈದಿರುವ ತಂದೆ.
ಕ್ಷುಲಕ ಕಾರಣಕ್ಕೆ ಕುಡಿದು ಅಪ್ಪ-ಮಗ ಆಗಾಗ ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ಕುಡಿದು ಗಲಾಟೆ ಮಾಡುತ್ತಿದ್ದ ಅಪ್ಪ-ಮಗನ ಕಾಟಕ್ಕೆ ಬೇಸತ್ತು ಪ್ರದೀಪ್ ತಾಯಿ ಮನೆ ಬಿಟ್ಟು ಹೋಗಿದ್ದರು. ಮನೆಯಲ್ಲಿ ಅಪ್ಪ-ಮಗ ಇಬ್ಬರೇ ವಾಸವಿದ್ದರು. ಶನಿವಾರ ರಾತ್ರಿ ಜಗಳವಾಡಿ ಮಗನಿಗೆ ಅಪ್ಪ ಕಡಿದು ಮಲಗಿದ್ದ. ಗಾಯಗೊಂಡಿದ್ದ ಮಗ ಪ್ರದೀಪ್ ಇಡೀ ರಾತ್ರಿ ರಕ್ತ ಹೋಗಿ ಮೃತಪಟ್ಟಿದ್ದಾನೆ. ಬೆಳಗ್ಗೆ ಮಗನ ಮೃತದೇಹವನ್ನು ಅಪ್ಪ ಹಾಲ್‌ನಿಂದ ಹೊರಕ್ಕೆ ಎಳೆದು ತಂದಿದ್ದನ್ನು ನೋಡಿದ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಬಳ ಕೇಳಿದ ಆಂಬ್ಯುಲೆನ್ಸ್ ಚಾಲಕನಿಗೆ ಥಳಿಸಿದ ಮಾಲೀಕ
ದುಡಿದ ಸಂಬಳವನ್ನು ಕೇಳಿದ್ದಕ್ಕಾಗಿ ಆಂಬ್ಯುಲೆನ್ಸ್ ಚಾಲಕನೊಬ್ಬನ ಮೇಲೆ ಮಾಲೀಕ ಹಾಗೂ ಮತ್ತೊಬ್ಬ ಚಾಲಕ ಹಲ್ಲೆ ಮಾಡಿರುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಸಂಬಳ ನೀಡುತ್ತೇನೆ ಎಂದು ನಂಬಿಸಿ ಕರೆಸಿಕೊಂಡ ಮಾಲೀಕ ನೈಸ್ ರಸ್ತೆಯಲ್ಲಿ ಚಾಲಕನ ಮೇಲೆ ದೌರ್ಜನ್ಯ ನಡೆಸಿದ್ದಾನೆ.
ಕಿರಣ್ ಎಂಬವರು ಮಾಲೀಕರಿಂದ ಹಲ್ಲೆಗೆ ಒಳಗಾದ ಚಾಲಕ. ಕಿರಣ್ ‘ಆಂಬ್ಯೂಲೆನ್ಸ್ ಕೇರ್ ಸರ್ವಿಸ್’ ಎಂಬ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಎರಡು ತಿಂಗಳಿನಿಂದ ಸಂಬಳ ನೀಡದ ಹಿನ್ನೆಲೆಯಲ್ಲಿ ಕಿರಣ್ ಕೆಲಸ ಬಿಟ್ಟಿದ್ದರು. ಬಾಕಿ ಇರುವ ಸಂಬಳ ಕೇಳಲು ಹೋದಾಗ, ಮಾಲೀಕ ನಾಗರಾಜ್ ಹಾಗೂ ಮತ್ತೊಬ್ಬ ಚಾಲಕ ಮಂಜುನಾಥ್ ಕಿರಣ್ ಮೇಲೆ ನೈಸ್ ರಸ್ತೆಯ ಟೋಲ್ ಬಳಿ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯ ದೃಶ್ಯಗಳನ್ನು ಅಲ್ಲಿಯೇ ಇದ್ದ ಮತ್ತೊಬ್ಬ ಚಾಲಕ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾನೆ.
ಸಂಬಳದ ವಿಚಾರವಾಗಿ ಖಾಸಗಿ ಆಸ್ಪತ್ರೆಯ ಆವರಣದಲ್ಲಿ ಕಿರಣ್ ಮತ್ತು ಮಾಲೀಕ ನಾಗರಾಜ್ ನಡುವೆ ಗಲಾಟೆಯಾಗಿತ್ತು. ಪ್ರಕರಣ ವಿಧಾನಸೌಧ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಪೊಲೀಸರು ರಾಜಿ ಸಂಧಾನ ನಡೆಸಿ ಕಳಿಸಿದ್ದರು. ಪೊಲೀಸರ ಮುಂದೆ ಸಂಬಳ ಕೊಡಲು ಒಪ್ಪಿಕೊಂಡಿದ್ದ ಮಾಲೀಕ ನಾಗರಾಜ್, ಸಂಬಳ ಕೊಡುತ್ತೇನೆ ಬಾ ಎಂದು ಕರೆಸಿಕೊಂಡು ಹಲ್ಲೆ ಮಾಡಿದ್ದಾನೆ.


