ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಚೈತ್ರಾ ಕುಂದಾಪುರ ತನ್ನ ತಂದೆಯನ್ನೇ ಕೊಲೆಗೈಯಲು ಸುಪಾರಿ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಚೈತ್ರಾ ಅವರ ತಂದೆ ಬಾಲಕೃಷ್ಣ ನಾಯಕ್ ಹೀಗೆ ಆರೋಪಿಸಿ, ಪೊಲೀಸರಿಗೆ ದೂರು ನೀಡಿದ್ದಾರೆ.
ಹಣಕಾಸಿನ ವ್ಯವಹಾರಗಳು ಮತ್ತು ಚೈತ್ರಾ ಅವರ ಮದುವೆಗೆ ಸಂಬಂಧಿಸಿದ ವಿವಾದಗಳೇ ಈ ಜಗಳಕ್ಕೆ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಚೈತ್ರಾ ತನ್ನ ಗೆಳೆಯರೊಂದಿಗೆ ಮನೆಗೆ ಬಂದು ದೊಡ್ಡ ಪ್ರಮಾಣದ ಹಣಕಾಸಿನ ವ್ಯವಹಾರಗಳನ್ನು ನಡೆಸುತ್ತಿದ್ದಳು. ಒಂದು ರಾತ್ರಿ ಚೈತ್ರಾ ಕೋಟಿಗಟ್ಟಲೆ ರೂಪಾಯಿಗಳನ್ನು ತಂದು ಎಣಿಸುತ್ತಿರುವುದನ್ನು ಕಂಡು ಭಯವಾಗಿ ಪ್ರಶ್ನಿಸಿದಾಗ ಚೈತ್ರಾ ದಬಾಯಿಸಿದಳು. ಈ ಹಣ ಉದ್ಯಮಿ ಗೋವಿಂದ ಬಾಬು ಪೂಜಾರಿಯದ್ದು ಎಂದು ನಂತರ ತಿಳಿಯಿತು. ಈ ವಿಷಯವನ್ನು ಹೊರಗೆ ಹೇಳಬಹುದೆಂಬ ಕಾರಣಕ್ಕೆ ಚೈತ್ರಾ ಮತ್ತು ನನ್ನ ಪತ್ನಿ ರೋಹಿಣಿ ನನಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದರು ಎಂದು ದೂರಿನಲ್ಲಿ ವಿವರಿಸಿದ್ದಾರೆ.
.
ಚೈತ್ರಾ ತನ್ನ ಗೆಳೆಯ ಶ್ರೀಕಾಂತ್ ಎಂಬಾತನನ್ನು ಮದುವೆಯಾಗುವ ನಿರ್ಧಾರವನ್ನು ತಿಳಿಸಿದಾಗ, ತಂದೆ ಬಾಲಕೃಷ್ಣ ಆತನನ್ನು ಮದುವೆಯಾಗಬಾರದು ಎಂದು ಸಲಹೆ ನೀಡಿದ್ದರಂತೆ. ಆಗ ಚೈತ್ರಾ, ಶ್ರೀಕಾಂತ್‌ನನ್ನು ಬಿಟ್ಟು ಬೇರೊಬ್ಬನನ್ನು ಮದುವೆಯಾದರೆ 5 ಲಕ್ಷ ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದ್ದಳು, ಇದರಲ್ಲಿ ರೋಹಿಣಿ ಕೂಡ ಶಾಮೀಲಾಗಿದ್ದಾಳೆ ಎಂದು ಬಾಲಕೃಷ್ಣ ಹೇಳಿದ್ದಾರೆ.
ಮದುವೆಗೆ ಬರದಿದ್ದರೆ ಭೂಗತ ದೊರೆಗಳ ಮೂಲಕ ನನ್ನನ್ನು ಕೊಲೆಗೈಯುವುದಾಗಿ ಚೈತ್ರಾ ನನಗೆ ಬೆದರಿಕೆ ಹಾಕಿದ್ದಾಳೆ. ಆಸ್ತಿಗಾಗಿ ಯಾವ ಕೃತ್ಯಕ್ಕೂ ಸಿದ್ಧಳಿದ್ದಾಳೆ. ನಾನು ಸತ್ತುಹೋಗಿದ್ದೇನೆ ಎಂದು ಹೇಳಿಕೊಂಡು ಬರುತ್ತಿದ್ದಾಳೆ. ನನಗೆ ರಕ್ಷಣೆಯನ್ನು ಒದಗಿಸಿ ಎಂದು ಬಾಲಕೃಷ್ಣ ದೂರಿನಲ್ಲಿ ಕೋರಿದ್ದಾರೆ.