ರಾತ್ರಿ ಮಂಚದಲ್ಲಿ ಮಲಗಿದ್ದ ತಂದೆ ಗಾಢ ನಿದ್ರಯಲ್ಲಿದ್ದಾಗ ಪಕ್ಕದಲ್ಲೇ ಮಲಗಿದ್ದ 26 ದಿನದ ಮಗುವಿನ ಮೇಲೆಯೇ ಮಗ್ಗಲು ಬದಲಾಯಿಸಿದ್ದರಿಂದ ಅವರ ಕೆಳಗೆ ಸಿಲುಕಿ ಮಗು ಮೃತಪಟ್ಟಿದೆ.
ಉತ್ತರ ಪ್ರದೇಶದ ಗಜ್ರೌಲಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆಕಸ್ಮಿಕವಾಗಿ ಸಿಲುಕಿ ನವಜಾತ ಶಿಶು ಅಸು ನೀಗಿದೆ. ಸದ್ದಾಂ ಅಬ್ಬಾಸಿ (25) ಮತ್ತು ಪತ್ನಿ ಅಸ್ಮಾ ಮೊದಲ ಮಗು ಅದಾಗಿತ್ತು. ರಾತ್ರಿ ದಂಪತಿ ಮಲಗುವ ಮುನ್ನ ಮಗುವನ್ನು ಹಾಸಿಗೆ ಮೇಲೆ ತಮ್ಮ ಮಧ್ಯೆ ಮಲಗಿಸಿಕೊಂಡಿದ್ದರು. ರಾತ್ರಿ ಹಾಲು ಕುಡಿಸಲು ತೊಟ್ಟಿಲಿನ ಬಳಿ ಹೋಗಬೇಕಾಗುತ್ತದೆ ಎಂದು ಆ ಮಹಿಳೆ ಮಗುವನ್ನು ಪಕ್ಕದಲ್ಲೇ ಮಲಗಿಸಿಕೊಂಡಿದ್ದರು. ಮಗುವಿನ ತಂದೆ ರಾತ್ರಿ ತಿಳಿಯದೆ ಮಗ್ಗುಲು ಬದಲಾಯಿಸಿದ್ದರಿಂದ 26 ದಿನಗಳ ಮಗು ಅವರ ದೇಹದ ಕೆಳಗೆ ಸಿಕ್ಕಿಹಾಕಿಕೊಂಡಿದೆ.
ಬೆಳಗ್ಗೆ ಅಸ್ಮಾ ಮಗುವಿಗೆ ಹಾಲುಣಿಸಲು ಎಚ್ಚರವಾದಾಗ ಮಗು ಪ್ರತಿಕ್ರಿಯಿಸದಿರುವುದನ್ನು ಕಂಡು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ. ಮಗು ಹುಟ್ಟಿದಾಗಿನಿಂದ ದುರ್ಬಲವಾಗಿತ್ತು, ಉಸಿರಾಟದ ತೊಂದರೆಯಿತ್ತು. ಕಾಮಾಲೆಯಿಂದ ಬಳಲುತ್ತಿತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸ್ ದೂರು ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


