ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆಯಲ್ಲಿ ಅಸ್ವಸ್ಥಗೊಂಡ ರೋಗಿಗೆ ಸಮಯಕ್ಕೆ ಸರಿಯಾಗಿ ತಾಲೂಕು ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಸಿಗದೆ ಮೃತಪಟ್ಟಿರುವ ಘಟನೆ ನಡೆದಿದೆ. ಸೈಯ್ಯದ್ ಅಕ್ರಮ್(42) ಮೃತಪಟ್ಟವರು.
ರೋಗಿ ಸೈಯ್ಯದ್ಗೆ ಬಿಪಿ ಕಡಿಮೆಯಾಗಿರುವ ಕಾರಣ ಸಮುದಾಯ ಆರೋಗ್ಯ ಕೇಂದ್ರದವರು ತಾಲೂಕು ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದರು. ಒಂದು ಗಂಟೆ ಕಾದರೂ ಆ್ಯಂಬುಲೆನ್ಸ್ ಸಿಕ್ಕಿಲ್ಲ. ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಇದ್ದರೂ ಚಾಲಕನಿಲ್ಲ ಎನ್ನಲಾಗಿದೆ.
ಈ ಆಸ್ಪತ್ರೆಯ ನಿರ್ಮಾಣಕ್ಕೆ ಭೂಮಿ ದಾನ ಮಾಡಿದಿದ್ದು ಮೃತ ಸೈಯ್ಯದ್ ತಂದೆ. ಜನರ ಜೀವ ಉಳಿಸಲು ಆಸ್ಪತ್ರೆಯ ಅಗತ್ಯ ಮನಗಂಡು ಕೋಟ್ಯಂತರ ಮೌಲ್ಯದ ಒಂದೂವರೆ ಎಕರೆ ಭೂಮಿಯನ್ನು ನೀಡಿದ್ದರು. ಅದೇ ಆಸ್ಪತ್ರೆಯಿಂದ ಅವರ ಮಗನಿಗೆ ಸರಿಯಾಗಿ ಚಿಕಿತ್ಸೆ ಸಿಗದೆ ಪ್ರಾಣ ಹೋಗಿದೆ. ನನ್ನ ಸಹೋದರನಿಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು. ಆಸ್ಪತ್ರೆಗೆ ಕೂಡಲೇ ಅಗತ್ಯ ತಜ್ಞ ವೈದ್ಯರು, ಸಿಬ್ಬಂದಿ ಮತ್ತು ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ಮಾಡಿ ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಸೋದರ ನಯಾಜ್ ಕಣ್ಣೀರು ಹಾಕಿದ್ದಾರೆ. ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದು, ನಮಗಾದ ತೊಂದರೆ ಮತ್ಯಾರಿಗೂ ಆಗಬಾರದು ಎಂದು ಹೇಳಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸೈಯ್ಯದ್ರನ್ನು ಸೋದರ ನಯಾಜ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ಪರೀಕ್ಷೆ ನಡೆಸಿದ ವೈದ್ಯರು ರೋಗಿಯ ಬಿಪಿ ಕಡಿಮೆಯಾಗಿದೆ, ಹೆಚ್ಚಿನ ಚಿಕಿತ್ಸೆಗೆ ತಾಲೂಕು ಆಸ್ಪತ್ರೆಗೆ ಕರೆದೊಯ್ಯು ವಂತೆ ಹೇಳಿದ್ದಾರೆ. ಆದರೆ ಒಂದು ಗಂಟೆ ಕಾದರೂ ಆ್ಯಂಬುಲೆನ್ಸ್ ಸಿಕ್ಕಿಲ್ಲ. ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಇದ್ದರೂ ಚಾಲಕನಿಲ್ಲ ಎನ್ನಲಾಗಿದೆ.


