ಕಳೆದ ಮೂರು ತಿಂಗಳಿಂದ ನಾಗರಹೊಳೆ, ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಬಂದ್ ಮಾಡಿದ್ದ ಸಫಾರಿ ಮತ್ತೆ ಆರಂಭಿಸಲು ಸರ್ಕಾರ ಸಮ್ಮತಿಸಿದೆ. ಆದರೆ ಇದಕ್ಕೆ ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇಲ್ಲಿ ಸಫಾರಿ ಬಂದ್ ಬಳಿಕ ಪ್ರವಾಸಿಗರು ನೆರೆರಾಜ್ಯದತ್ತ ತೆರಳಲು ಆರಂಭಿಸಿದ್ದರು. ಈ ಹಿನ್ನೆಲೆ ಸಫಾರಿ ಆರಂಭಕ್ಕೆ ಒತ್ತಾಯ ಕೇಳಿಬಂದಿತ್ತು. ಈಗ ಸರ್ಕಾರ ಸಫಾರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸರ್ಕಾರದ ಈ ನಿರ್ಧಾರದ ವಿರುದ್ಧ ರೈತರು ಆಕ್ರೋಶ ಹೊರಹಾಕಿ, ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಮೈಸೂರು, ಚಾಮರಾಜನಗರ ಜಿಲ್ಲೆಯ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಾದ ಬಂಡೀಪುರ ಹಾಗೂ ನಾಗರಹೊಳೆ ವ್ಯಾಪ್ತಿಯಲ್ಲಿ ಮಾನವ ವನ್ಯಪ್ರಾಣಿ ಸಂಘರ್ಷ ತೀವ್ರಗೊಂಡಿದ್ದ ಕಾರಣ ರೈತರು ಸಫಾರಿ ಬಂದ್ ಮಾಡುವಂತೆ ಒತ್ತಾಯಿಸಿದ್ದರು.
ಕಾಡಂಚಿನ ಪ್ರದೇಶಗಳಲ್ಲಿ ವನ್ಯಜೀವಿ ಮಾನವ ಸಂಘರ್ಷ ಕಡಿಮೆಯಾಗಿದ್ದು ತಾಂತ್ರಿಕ ಸಮಿತಿ ವರದಿಯ ಪರಿಶೀಲಿಸಿ ಸರ್ಕಾರ ಮರು ಸಫಾರಿ ಆರಂಭಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಸಫಾರಿ ಆರಂಭವಾಗಲಿದೆ. ವನ್ಯಜೀವಿಗಳಿಂದ
ಮತ್ತೆ ಪ್ರಾಣ ಹಾನಿ ಸಂಭವಿಸಿದರೆ ಸರ್ಕಾರವೇ ಹೊಣೆಯಾಗುತ್ತದೆ ಎಂದು ರೈತರು ಹೇಳಿದ್ದಾರೆ.
ಸಫಾರಿ ನಿಷೇಧ ಬಳಿಕ ಮತ್ತೆ ಸಫಾರಿ ಆರಂಭಿಸುವಂತೆ ಹೊಟೇಲ್, ರೆಸಾರ್ಟ್ ಮಾಲೀಕರು ಮನವಿ ಮಾಡಿದ್ದರು. ವೈಜ್ಞಾನಿಕವಾಗಿ ಸಫಾರಿ ಆರಂಭಿಸುವಂತೆ ಆಗ್ರಹ ಕೇಳಿ ಬಂದಿತ್ತು. ಈಗ ರೈತ ಸಂಘದ ಮುಖಂಡರು ಆಕ್ರೋಶ ವ್ತಕ್ತಪಡಿಸಿದ್ದು, ಸಫಾರಿ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.


