ಚಾಮರಾಜನಗರ ತಾಲೂಕಿನ ಗಂಗವಾಡಿ ಗ್ರಾಮದಲ್ಲಿ ರೈತರೊಬ್ಬರು ಕುತೂಹಲದಿಂದ ಚಿರತೆ ಸೆರೆಗೆ ಇಟ್ಟಿದ್ದ ಬೋನಿನೊಳಗೆ ಹೋಗಿದ್ದು, ಮೂರು ಗಂಟೆ ಅದರೊಳಗೆ ಲಾಕ್ ಆಗಿದ್ದಾರೆ.
ಗ್ರಾಮದ ಕಿಟ್ಟಿ ಎಂಬವರು ಯಾರೂ ಇಲ್ಲದ ವೇಳೆ ಕುತೂಹಲದಿಂದ ಬೋನಿನೊಳಗೆ ಹೋಗಿ ಸಿಕ್ಕಿಹಾಕಿಕೊಂಡು ಮೂರು ಗಂಟೆ ಅದರೊಳಗೆ ಪರದಾಡಿದ್ದಾರೆ. ಬಾಗಿಲು ತೆರೆಯಲು ಯತ್ನಿಸಿದರೂ ಸಾಧ್ಯವಾಗದೆ ಕಾಪಾಡಿ ಕಾಪಾಡಿ ಎಂದು ಕೂಗಿಕೊಂಡಿದ್ದು, ಕೂಗಾಟ ಕೇಳಿ ಸ್ಥಳಕ್ಕೆ ಬಂದ ರೈತರು ಬೋನಿನೊಳಗಿಂದ ಬಿಡಿಸಿದ್ದಾರೆ.
ಗ್ರಾಮದಲ್ಲಿ ಮೂರು ಹಸುಗಳನ್ನು ಚಿರತೆ ಕೊಂದು ಹಾಕಿತ್ತು. ಈ ಹಿನ್ನೆಲೆ ಚಿರತೆ ಸೆರೆಗೆ ರುದ್ರ ಎಂಬವರ ಜಮೀನಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇಟ್ಟಿದ್ದರು. ಕಿಟ್ಟಿ ಕುತೂಹಲದಿಂದ ಬೋನಿನ ಒಳಹೊಕ್ಕಿದ್ದರು. ಈ ವೇಳೆ ಆಟೋಮ್ಯಾಟಿಕ್ ಆಗಿ ಬೋನಿನ ಬಾಗಿಲು ಲಾಕ್ ಆಗಿದೆ.
ಗುಂಡ್ಲುಪೇಟೆಯಯಡವನಹಳ್ಳಿ ಬಳಿ ಇತ್ತೀಚೆಗೆ ಚಿರತೆ ಮೇಕೆಯನ್ನು ಹೊತ್ತೊಯ್ದ ಸ್ಥಳದಲ್ಲಿ ಕೂಂಬಿಂಗ್ ನಡೆಸುವಾಗ ಅರಣ್ಯ ಇಲಾಖೆಯ ಆನೆ ಕಾವಲುಪಡೆ ಸಿಬ್ಬಂದಿ ಬಂಗಾರ್ ಎಂಬವರ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿತ್ತು.


