ರಾಮನಗರದ ಹಾರೋಹಳ್ಳಿ ತಾಲೂಕಿನ ದುಮ್ಮಸಂದ್ರ ಗ್ರಾಮದಲ್ಲಿ ಕಾಡಾನೆ ದಾಳಿಗೆ ರೈತರೊಬ್ಬರು ಬಲಿಯಾಗಿದ್ದಾರೆ. ರೈತ ಪುಟ್ಟಮಾದೇಗೌಡ (48) ಆನೆ ದಾಳಿಗೆ ಬಲಿಯಾದವರು.
ಮುಂಜಾನೆ ಜಮೀನಿಗೆ ನೀರು ಹಾಯಿಸಲು ಹೋಗುತ್ತಿದ್ದಾಗ ಏಕಾಏಕಿ ಕಾಡಾನೆ ದಾಳಿ ಮಾಡಿದೆ. ಮಾದೇಗೌಡ ಸ್ಥಳದಲ್ಲೇ ಅಸು ನೀಗಿದ್ದಾರೆ. ಬನ್ನೇರುಘಟ್ಟ ಅರಣ್ಯ ಪ್ರದೇಶ ವ್ಯಾಪ್ತಿಯಿಂದ ಬಂದಿರುವ ಕಾಡಾನೆ ರಾತ್ರಿ ರೈತರ ಜಮೀನಿನಲ್ಲಿ ದಾಂಧಲೆ ನಡೆಸಿ ರಾಗಿ ಬೆಳೆಗಳನ್ನು ಸಂಪೂರ್ಣ ನಾಶ ಮಾಡಿದೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತ ರೈತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ಭೀತಿ ಹುಟ್ಟಿಸಿದ್ದ ಚಿರತೆ ಸೆರೆ
ದೊಡ್ಡಬಳ್ಳಾಪುರ ತಾಲೂಕಿನ ಹಾರೋನಹಳ್ಳಿ ಗ್ರಾಮದಲ್ಲಿ ಭೀತಿ ಹುಟ್ಟಿಸಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದಾರೆ. ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಚಿರತೆಯ ಉಪಟಳ ಹೆಚ್ಚಾಗಿತ್ತು. ಮೇಕೆ, ನಾಯಿಗಳ ಮೇಲೆ ದಾಳಿ ನಡೆಸಿ ಬಲಿ ಪಡೆದಿತ್ತು. ಇದರಿಂದ ಗ್ರಾಮಸ್ಥರು ಭಯಗೊಂಡಿದ್ದರು.
ಗ್ರಾಮದ ಮುಖಂಡ, ಆರೂಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀಧರ್ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅರಣ್ಯ ಅಧಿಕಾರಿಗಳು ಬೋನ್ ಅಳವಡಿಸಿದ್ದರು. ಬೋನು ಇರಿಸಿದ ಒಂದೇ ದಿನಕ್ಕೆ ಚಿರತೆ ಬೋನಿಗೆ ಬಿದ್ದಿದೆ.


