ಬೆಂಗಳೂರಿನ ದೇವನಹಳ್ಳಿಯ ಹೆಗ್ಗನಹಳ್ಳಿಯಲ್ಲಿ ಪೌರೋಹಿತ್ಯ ಮಾಡ್ಕೊಂಡಿದ್ದ ಕುಮಾರಪ್ಪ ಎಂಬವರ ಇಡೀ ಕುಟುಂಬ ಆತ್ಮಹತ್ಯೆಗೆ ಯತ್ನಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ.
60 ವರ್ಷದ ಕುಮಾರಪ್ಪ, ಪತ್ನಿ 55 ವರ್ಷದ ರಮಾ ಮತ್ತು ಗಂಡು ಮಕ್ಕಳಾದ ಅಕ್ಷಯ್ ಹಾಗೂ ಅರುಣ್ ಸಾಮೂಹಿಕವಾಗಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಿರಿಯ ಮಗ ಅರುಣ್ ಕ್ರಿಮಿಮಿನಾಶಕ ಸೇವಿಸಿ ನಂತರ ನೇಣು ಬಿಗಿದುಕೊಂಡಿದ್ದಾನೆ. ಕುಮಾರಪ್ಪ ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಕ್ರಿಮಿನಾಶಕ ಸೇವಿಸಿದ ಬಳಿಕ ಅರಚಾಡುತ್ತಾ ಒದ್ದಾಡುತ್ತಿದ್ದ ರಮಾ ಹಾಗೂ ಕಿರಿಯ ಮಗನನ್ನು ಸ್ಥಳೀಯರು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರ ಸ್ಥಿತಿಯೂ ಗಂಭೀರವಾಗಿದೆ.
ಮನೆಯಲ್ಲಿ ಮದ್ಯದ ಬಾಟಲಿ ಮತ್ತು ಕ್ರಿಮಿನಾಶಕಗಳ ಬಾಟಲಿಗಳು ಪತ್ತೆಯಾಗಿವೆ. ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಚಿಕ್ಕಜಾಲ ಪೊಲೀಸರು ಹಾಗೂ ದೇವನಹಳ್ಳಿ ಎಸಿಪಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಏನು ಇರಬಹುದು ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 


