ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೌಟುಂಬಿಕ ಕಲಹದಿಂದ ನೊಂದು ಟೆಕ್ಕಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ, ಅತ್ತೆಯ ಕಾಟದಿಂದ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು ನಿವಾಸಿ ಸುಶ್ಮಾ (35) ಡೆಲ್ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ಐದು ವರ್ಷದ ಹಿಂದೆ ಪುನೀತ್ ಕುಮಾರ್ನನ್ನು ವಿವಾಹವಾಗಿದ್ದರು. ದಂಪತಿಗೆ ನಾಲ್ಕು ವರ್ಷದ ಮಗ ಇದ್ದಾನೆ. ಮನೆಯಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಆಗಾಗ ಕಲಹ ನಡೆಯುತ್ತಿದ್ದವು ಎನ್ನಲಾಗಿದೆ.
ಅತ್ತೆ ಕಲ್ಪನಾ ಅವರೊಂದಿಗೆ ಅಡುಗೆ ವಿಚಾರದಲ್ಲಿ ವಾಗ್ವಾದ ನಡೆದಿತ್ತು, ಆಕೆಯ ಅತ್ತೆ ಅಡುಗೆ ವಿಷಯದಲ್ಲಿ ಕಿರಿಕ್ ಮಾಡುತ್ತಿದ್ದು, ಇತರ ವಿಷಯಗಳಲ್ಲಿಯೂ ಕಿರುಕುಳ ನೀಡುತ್ತಿದ್ದರು ಎಂದು ಸುಶ್ಮಾ ಕುಟುಂಬದವರು ಆರೋಪಿಸಿದ್ದಾರೆ. ವರದಕ್ಷಿಣೆ ಕಿರುಕುಳ ಆರೋಪದಡಿ ಪುನೀತ್ ಕುಮಾರ್ನನ್ನೂ ಪೊಲೀಸರು ಬಂಧಿಸಿದ್ದು, ಪರಾರಿಯಾಗಿರುವ ಅತ್ತೆ ಕಲ್ಪನಾ ಬಂಧನಕ್ಕಾಗಿ ಶೋಧ ಮುಂದುವರಿದಿದೆ.
ನದಿಗೆ ಹಾರಿ ಮಹಿಳೆ ಆತ್ಮಹತ್ಯೆ
ವೆಸ್ಲಿ ಸೇತುವೆಯಿಂದ ಕಾವೇರಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ನಡೆದಿದೆ. ರಶ್ಮಿ (39) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಶವವನ್ನು ನದಿಯಿಂದ ಪೊಲೀಸರು ಮೇಲೆತ್ತಿದ್ದಾರೆ. ಪತಿ ಲೋಕೇಶ್ ಹಾಗೂ ಮಕ್ಕಳ ಜೊತೆ ರಶ್ಮಿ ಬೆಂಗಳೂರಿನಲ್ಲಿ ನೆಲೆಸಿದ್ದಳು. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


