ಕೌಟುಂಬಿಕ ಕಲಹದ ಕಾರಣ ಮಗನೊಬ್ಬ ತಂದೆಯನ್ನೇ ಹತ್ಯೆ ಮಾಡಿರುವ ಘಟನೆ ಹಾಸನದ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದಲ್ಲಿ ನಡೆದಿದೆ. ಸತೀಶ್ (60) ಕೊಲೆಯಾದ ತಂದೆ. ರಂಜಿತ್ (28) ತಂದೆಯನ್ನು ಕೊಲೆಗೈದ ಆರೋಪಿ.
ಸತೀಶ್ ಸರಿಯಾಗಿ ಕುಟುಂಬ ನಿರ್ವಹಣೆ ಮಾಡದಿರುವುದರ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತಿದ್ದ ರಂಜಿತ್ ಹಾಗೂ ತಾಯಿ ನಿರ್ಮಲ ಕೆ.ಆರ್.ನಗರದಲ್ಲಿ ಪ್ರತ್ಯೇಕವಾಗಿ ವಾಸವಿದ್ದರು. ಇದೇ ವಿಚಾರಕ್ಕೆ ತಂದೆ ಜೊತೆ ಆಗಾಗ ಜಗಳ ನಡೆಯುತ್ತಿತ್ತು.
ರಾತ್ರಿ ತಂದೆ-ಮಗನ ನಡುವೆ ಜಗಳ ಶುರುವಾಗಿದ್ದು, ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿ ಸ್ಟೀಲ್ ರಾಡ್‌ನಿಂದ ತಂದೆ ಸತೀಶ್ ತಲೆಗೆ ಹೊಡೆದು ರಂಜಿತ್ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯುವತಿ ಆತ್ಮಹತ್ಯೆಗೆ ಕಾರಣನಾಗಿದ್ದ ಆರೋಪಿ ಪರಾರಿ
ಯುವತಿಯನ್ನು ಪ್ರೀತಿಸುವಂತೆ ಪೀಡಿಸಿ ಆತ್ಮಹತ್ಯೆಗೆ ಕಾರಣನಾಗಿದ್ದ ಕಾರವಾರ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಚೈತ್ರಾ ಕೊಠಾರಕರ್ ಪುತ್ರ ಚಿರಾಗ್ ಪರಾರಿಯಾಗಿದ್ದಾನೆ. ಕದ್ರಾ ಕೆಪಿಸಿ ಕಾಲೋನಿಯ ಯುವತಿ ರಿಶೇಲ್ ಡಿಸೋಜಾ (20) ಎಂಬ ಯುವತಿಗೆ ಪ್ರೀತಿಸುವಂತೆ ಪೀಡಿಸುತಿದ್ದ, ಆಕೆ ತಿರಸ್ಕರಿಸಿದ್ದಕ್ಕೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತು ರಿಶೇಲ್ ಡಿಸೋಜ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಚಿರಾಗ್ ವಿರುದ್ಧ ಕದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಆತನನ್ನು ಬಂಧಿಸಲು ಕಾರವಾರದ ನಂದನಗದ್ದಾದಲ್ಲಿ ಇರುವ ಮನೆಗೆ ತೆರಳಿದ್ದು, ಬಂಧನ ಭೀತಿಯಿಂದ ಪರಾರಿಯಾಗಿದ್ದಾನೆ. ಪೊಲೀಸರು ವಿಶೇಷ ತಂಡ ರಚಿಸಿ ಈತನಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.


