ಪಂಜಾಬ್ ನ ಲೂಧಿಯಾನದಿಂದ ನಾನಾ ಬ್ರಾಂಡೆಡ್ ಕಂಪೆನಿಗಳ ಹೆಸರಿನಲ್ಲಿ ಬೆಂಗಳೂರಿಗೆ ನಕಲಿ ಷೂಗಳು ಸರಬರಾಜಾಗುತ್ತಿದ್ದು, ಗ್ರಾಹಕರಿಗೆ ವಂಚಿಸಲಾಗುತ್ತಿದೆ. 50% 60% ರಿಯಾಯಿತಿ ಎಂದು ಆಫರ್ ಮುಂದಿಟ್ಟು ಐದು ಸಾವಿರದ ಷೂ ಐನೂರಕ್ಕೆ ಸೇಲ್ ಅಂತ ಗ್ರಾಹಕರನ್ನು ನಂಬಿಸಿ ನಕಲಿ ಚಪ್ಪಲಿ, ಷೂ ಮಾರಾಟ ಮಾಡ್ತಿದ್ದ ಅಂಗಡಿ, ಗೋಡೌನ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಹದಿನೈದು ಲಕ್ಷಕ್ಕೂ ಅಧಿಕ ಮೌಲ್ಯದ ನಕಲಿ ಬ್ರಾಂಡೆಡ್ ಷೂ, ಚಪ್ಪಲ್ಲಿ ವಶಕ್ಕೆ ಪಡೆಯಲಾಗಿದೆ. ಯಶವಂತಪುರದ ಪೋರ್ ಕೆ ಶೂಸ್ ಅಂಗಡಿ ಗೋಡೌನ್ ಮೇಲೆ ದಾಳಿ ನಡೆಇದೆ. ಪ್ರತಿಷ್ಠಿತ ಬ್ರಾಂಡ್ ಗಳಾದ ಕ್ರಾಕ್ಸ್, ನೈಕಿ, ಪೊಲೋ, ರಾಲ್ಪ್ ಲಾರೆನ್ಸ್ ಹೆಸರಿನಲ್ಲಿ ಮಾರಾಟಕ್ಕಿಟ್ಟಿದ್ದ ಚಪ್ಪಲಿ, ಷೂಗಳನ್ನು ವಶಕ್ಕೆ ಪಡೆಯಲಾಗಿದೆ.
ಐದು ಸಾವಿರದ ಷೂ ಐನೂರಕ್ಕೆ, ನಾಲ್ಕು ಸಾವಿರದ ಚಪ್ಪಲಿ 400 ಕ್ಕೆ ಮಾರಾಟ ಮಾಡಲಾಗುತ್ತಿತ್ತು, ಯಶವಂತಪುರ ಪೊಲೀಸರು ಮೊಹಮ್ಮದ್ ಇಮ್ರಾನ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪಂಜಾಬ್ ನ ಲೂಧಿಯಾನದಿಂದ ನಕಲಿ ಬ್ರಾಂಡೆಡ್ ವಸ್ತು ಬೆಂಗಳೂರಿಗೆ ಬರುತತಿರುವುದು ಗೊತ್ತಾಗಿದೆ.
ದಾವಣಗೆರೆಯಲ್ಲಿ ಸೈಬರ್ ವಂಚಕರು ಸೆರೆ
ದಾವಣಗೆರೆ ಸೈಬರ್ ಕ್ರೈಂ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ದೇಶದ ನಾನಾ ಭಾಗಗಳ ಬ್ಯಾಂಕ್ ಖಾತೆಗಳಿಂದ ಕೋಟಿ ಕೋಟಿ ಹಣ ಕಳವು ಮಾಡುತ್ತಿದ್ದ ಸೈಬರ್ ವಂಚಕರನ್ನು ಬಂಧಿಸಿದ್ದಾರೆ. ಪೊಲೀಸರು 150 ಕೋಟಿ ರೂಪಾಯಿ ವಂಚನೆಯ ಜಾಲವನ್ನು ಬೇಧಿಸಿದ್ದಾರೆ. ಮೂವರು ಆರೋಪಿಗಳಲ್ಲಿ ಒಬ್ಬ ಸಿಕ್ಕಿಬಿದ್ದಿದ್ದಾನೆ.
ದಾವಣಗೆರೆ ನಿಟ್ಟುವಳ್ಳಿ ಕೆನರಾ ಬ್ಯಾಂಕ್ ಖಾತೆದಾರ ಪ್ರಮೋದ್ ಎಚ್.ಎನ್. ಅವರ ಖಾತೆಯಿಂದ ₹52,60,523 ನಾಪತ್ತೆಯಾಗಿ ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಯನ್ನು ಸೈಯದ್ ಅರ್ಫಾತ್ (28) ಎಂದು ಗುರುತಿಸಲಾಗಿದ್ದು, ಈತ ಹಾಸನ ಜಿಲ್ಲೆಯ ಬೇಲೂರು ಶಾಂತಿನಗರ ನಿವಾಸಿ.
ಜುಲೈ 27ರಿಂದ ಆಗಸ್ಟ್ 19ರವರೆಗೆ ಆರೋಪಿಯ ಖಾತೆಯಲ್ಲಿ 150 ಕೋಟಿ ರೂಪಾಯಿ ವಂಚನೆಯ ಹಣ ಠೇವಣಿಯಾಗಿದೆ. 132 ಕೋಟಿ ರೂಪಾಯಿ ವಿತ್‌ಡ್ರಾ ಆಗಿದೆ. ಉಳಿದ 18 ಕೋಟಿ ರೂಪಾಯಿ ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಯು ಉತ್ತರ ಪ್ರದೇಶದ ಗಾಜೀಯಾಬಾದ್, ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಆಂಧ್ರಪ್ರದೇಶದ ಏಲೂರು, ಮಹಾರಾಷ್ಟ್ರದ ಮುಂಬೈ, ಕರ್ನಾಟಕದ ಬೆಂಗಳೂರು ಹಾಗೂ ದಾವಣಗೆರೆ ಸೇರಿದಂತೆ ಹಲವು ರಾಜ್ಯಗಳ ಸೈಬರ್ ಕ್ರೈಂ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪತ್ತೆಯಾಗಿದೆ.