Menu

ತಪಾಸಣೆಯೆಂದು ಮನೆಗೆ ದಾಳಿ ಮಾಡಿ ದರೋಡೆ ಮಾಡುತ್ತಿದ್ದ ನಕಲಿ ಪೊಲೀಸ್‌ ಅರೆಸ್ಟ್‌

ಖಾಸಗಿ ಕಂಪನಿ ಉದ್ಯೋಗಿಯ ಮನೆಗೆ ತಪಾಸಣೆಗೆಂದು ಬಂದಿರುವುದಾಗಿ ಹೇಳಿ ದರೋಡೆ ಮಾಡಿದ್ದ ನಕಲಿ ಪೊಲೀಸ್‌ ಮತ್ತು ಮೂವರು ಸಹಚರರನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಕ್ರಮ ಚಟುವಟಿಕೆ ಆರೋಪ ಹೊರಿಸಿ ಮನೆಗೆ ನುಗ್ಗಿ ತಪಾಸಣೆ ಎಂದು ಹೇಳಿ ಹಣ ಸುಲಿಗೆ ಮಾಡಿದ್ದ ನಕಲಿ ಸಬ್ ಇನ್ಸ್‌ಪೆಕ್ಟರ್ ಮತ್ತಿಕೆರೆ ನಿವಾಸಿ ಎಚ್.ಮಲ್ಲಿಕಾರ್ಜುನ್‌ ನಾಯಕ್ ಅಲಿಯಾಸ್ ಪಿಎಸ್‌ಐ ಮಲ್ಲಣ್ಣ, ಸಹಚರರಾದ ವಿ.ಪ್ರಮೋದ್, ಎಚ್‌.ಟಿ.ವಿನಯ್‌ ಹಾಗೂ ಬಾಗಲಗುಂಟೆಯ ಪಿ.ಹೃತ್ವಿಕ್ ಅಲಿಯಾಸ್ ಮೋಟಾ ಬಂಧಿತರು.

ಪೊಲೀಸರು ಆರೋಪಿಗಳಿಂದ 45 ಸಾವಿರ ನಗದು, ಕಾರು ಹಾಗೂ ಬೈಕ್ ಜಪ್ತಿ ಮಾಡಿದ್ದಾರೆ. ಕೆವುಲ ದಿನಗಳ ಹಿಂದೆ ನರಸೀಪುರ ಲೇಔಟ್‌ನ ಕೆ.ಎ.ನವೀನ್ ಎಂಬವರ ಮನೆಗೆ ಈ ವಂಚಕರು ಪೊಲೀಸರರೆಂದು ಹೇಳಿಕೊಂಡು ದಾಳಿ ನಡೆಸಿ ಸುಲಿಗೆ ಮಾಡಿದ್ದರು. ಬಳಿಕ ಸಂತ್ರಸ್ತ ದೂರು ನೀಡಿದ್ದು, ಆ ದೂರು ಆಧರಿಸಿ ಇನ್ಸ್‌ಪೆಕ್ಟರ್ ಸಿ.ಬಿ.ಶಿವಸ್ವಾಮಿ ನೇತೃತ್ವದ ತಂಡವು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ತನಿಖೆ ನಡೆಸಿ ನಕಲಿ ಪೊಲೀಸರನ್ನು ಬಂಧಿಸಿದೆ.

ಬಳ್ಳಾರಿ ಸಿರಗುಪ್ಪ ತಾಲೂಕಿನ ಎಚ್.ಮಲ್ಲಿಕಾರ್ಜುನ್‌ ನಾಯಕ್ ಅಲಿಯಾಸ್ ಪಿಎಸ್‌ಐ ಮಲ್ಲಣ್ಣ ಸಬ್ ಇನ್ಸ್‌ಪೆಕ್ಟರ್‌ ಆಗುವ ಕನಸು ಈಡೇರದೆ ಹೋದಾಗ ಸುಲಿಗೆಕೋರನಾಗಿದ್ದಾನೆ. ಪೊಲೀ ಆಗಬೇಕೆಂದು ಆತ ಕೋಚಿಂಗ್‌ ಸೆಂಟರ್‌ನಲ್ಲಿ ತರಬೇತಿ ಪಡೆದಿದ್ದ. ಆದರೆ ನೇಮಕಾತಿ ಪರೀಕ್ಷೆಯಲ್ಲಿ ಆತ ಅನುತ್ತೀರ್ಣನಾಗಿದ್ದ. ಪೊಲೀಸ್ ಇಲಾಖೆಗೆ ಸೇರದೆ ಹೋದರೂ ಖಾಕಿ ಧರಿಸಿ ಜನರನ್ನು ಬೆದರಿಸಿ ಹಣ ಸಂಪಾದನೆಗೆ ಮಲ್ಲಣ್ಣ ನಿರ್ಧರಿಸಿದ್ದ. ಆತನ ಮೂವರು ಸ್ನೇಹಿತರು ಸಾಥ್ ಕೊಟ್ಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಿಎಸ್‌ಐ ಸಮವಸ್ತ್ರ ಧರಿಸಿ ನಕಲಿ ಪಿಎಸ್‌ಐ ಆಗಿ ಸಾರ್ವಜನಿಕರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ. ನರಸೀಪುರ ಲೇಔಟ್‌ನಲ್ಲಿ ನವೀನ್‌ ಬಗ್ಗೆ ಮಲ್ಲಣ್ಣನಿಗೆ ಆತನ ಸಹಚರ ಹೃತ್ವಿಕ್‌ನಿಂದ ಮಾಹಿತಿ ಸಿಕ್ಕಿತು. ಈ ಮನೆಯಲ್ಲಿ ಪೊಲೀಸರ ಸೋಗಿನಲ್ಲಿ ದರೋಡೆಗೆ ಆರೋಪಿಗಳು ಸಂಚು ರೂಪಿಸಿ ಪಿಎಸ್‌ಐ ಸಮವಸ್ತ ಹಾಕಿಕೊಂಡು ಸಹಚರರ ಜತೆ ಮಲ್ಲಣ್ಣ ದಾಳಿ ನಡೆಸಿದ್ದಾನೆ. ನೀನು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಿಗಿರುವ ಮಾಹಿತಿ ಇದೆ. ಮನೆಗೆ ಶೋಧನೆಗೆ ಬಂದಿರುವುದಾಗಿ ಆರೋಪಿಗಳು ಬೆದರಿಸಿದ್ದರು.

ಬಳಿಕ ನವೀನ್‌ ಮೇಲೆ ಹಲ್ಲೆ ನಡೆಸಿದ ಆರೋಪಿಗಳು, ಆನ್‌ಲೈನ್‌ ಮೂಲಕ 87 ಸಾವಿರ ರೂ. ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದು. ಮನೆಯಲ್ಲಿದ್ದ 55 ಸಾವಿರ ರೂ. ದೋಚಿ ಆರೋಪಿಗಳು ಪರಾರಿಯಾಗಿದ್ದರು. ವಿಚಾರಿಸಿದಾಗ ನಕಲಿ ಪೊಲೀಸರು ಎಂಬುದು ನವೀನ್‌ಗೆ ಗೊತ್ತಾಗಿ ವಿದ್ಯಾರಣ್ಯಪುರ ಠಾಣಗೆ ತೆರಳಿ ದೂರು ಸಲ್ಲಿಸಿದ್ದಾರೆ. ಪೊಲೀಸರು ಜಾಲಾಡಿದಾಗ ಆರೋಪಿಗಳ ಸುಳಿವು ಸಿಕ್ಕಿದೆ. ಬಳಿಕ ಮಲ್ಲಣ್ಣನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈವೆಲ್ಲ ವಿಚಾರ ಬಯಲಾಗಿದೆ.

ನವೀನ್ ಹಾಗೂ ಆರೋಪಿ ಹೃತ್ವಿಕ್ ಸ್ನೇಹಿತರಾಗಿದ್ದು, ಒಂದೇ ಕಂಪನಿಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರು.ವೈಯಕ್ತಿಕ ಕಾರಣಗಳಿಗೆ ಸ್ನೇಹಿತರ ಮಧ್ಯೆ ಬಿರುಕು ಮೂಡಿತ್ತು. ಈಹಿನ್ನಲೆಯಲ್ಲಿ ಪಿಎಸ್ಐ ಮಲ್ಲಣ್ಣನಿಗೆ ಹೇಳಿ ಆತ ದರೋಡೆ ಮಾಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *