ರಾಜ್ಯದಲ್ಲಿ ನಕಲಿ ನಂದಿನಿ ತುಪ್ಪ ತಯಾರಿಕೆ ಮತ್ತು ವಿತರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಬೆಂಗಳೂರು ಸಿಸಿಬಿ ಪೊಲೀಸರು ಈ ಅಕ್ರಮದ ಪ್ರಮುಖ
ಸೂತ್ರಧಾರರಾದ ಮೈಸೂರಿನ ಗಂಡ ಮತ್ತು ಹೆಂಡತಿಯನ್ನು ಬಂಧಿಸಿದ್ದಾರೆ.
ಶಿವಕುಮಾರ್ ಮತ್ತು ಪತ್ನಿ ರಮ್ಯಾ ಬಂಧಿತರಾಗಿದ್ದು, ಸಿಸಿಬಿ ಪೊಲೀಸರ ತನಿಖೆಯಲ್ಲಿ ಇವರೇ ನಕಲಿ ನಂದಿನಿ ಉತ್ಪನ್ನಗಳ ತಯಾರಿಕೆ ಘಟಕದ ಕಿಂಗ್‌ಪಿನ್‌ಗಳು ಎಂಬುದು ಸಾಬೀತಾಗಿದೆ.
ಸಿಸಿಬಿ ಡಿಸಿಪಿ ಶ್ರೀಹರಿಬಾಬು ಮಾಹಿತಿ ನೀಡಿದ್ದು, ಆರೋಪಿ ದಂಪತಿ ತಮಿಳುನಾಡಿನಲ್ಲಿ ನಕಲಿ ತುಪ್ಪ ತಯಾರಿಕೆ ಘಟಕ ಸ್ಥಾಪಿಸಿದ್ದರು. ಘಟಕದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ನಕಲಿ ತುಪ್ಪ ತಯಾರಿಸಲು ಬಳಸುತ್ತಿದ್ದ ಹೈಟೆಕ್ ಯಂತ್ರಗಳು ಪತ್ತೆಯಾಗಿವೆ. ಈ ಯಂತ್ರಗಳನ್ನು ಬಳಸಿಕೊಂಡು ದಂಪತಿ ನಂದಿನಿ ಲೇಬಲ್‌ನ ನಕಲಿ ತುಪ್ಪಗಳನ್ನು ತಯಾರಿಸಿ ರೀ-ಪ್ಯಾಕಿಂಗ್ ಮಾಡಿ ಮಾರಾಟ ಮಾಡುತ್ತಿದ್ದರು. ಪೊಲೀಸರು ಮೆಷಿನರಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಸಿಸಿಬಿ ಪೊಲೀಸರು ನವೆಂಬರ್ 14ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಗೋಡೌನ್ ಮೇಲೆ ದಾಳಿ ನಡೆಸಿ, 8,136 ಲೀಟರ್ ನಕಲಿ ನಂದಿನಿ ತುಪ್ಪ ವಶಪಡಿಸಿಕೊಂಡಿದ್ದರು. ಪ್ರಕರಣ ದಾಖಲಿಸಿ ಈ ಜಾಲದಲ್ಲಿದ್ದ ಡಿಸ್ಟ್ರಿಬ್ಯೂಟರ್ ಮಹೇಂದ್ರ, ಮಗ ದೀಪಕ್ ಮತ್ತು ಮುನಿರಾಜು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿತ್ತು. ಶಿವಕುಮಾರ್ ಮತ್ತು ರಮ್ಯಾ ತಯಾರಿಸಿದ ನಕಲಿ ಉತ್ಪನ್ನಗಳನ್ನೇ ಮಹೇಂದ್ರ ಆ್ಯಂಡ್ ಗ್ಯಾಂಗ್ ಮಾರಾಟ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ತನಿಖೆ ಮುಂದುವರಿಸಿರುವ ಸಿಸಿಬಿ ಪೊಲೀಸರು, ಆರೋಪಿ ದಂಪತಿಯ ಬ್ಯಾಂಕ್ ಖಾತೆಯಲ್ಲಿದ್ದ 60 ಲಕ್ಷ ರೂಪಾಯಿಫ್ರೀಜ್ ಮಾಡಿದ್ದಾರೆ. ಅಲ್ಲದೆ, ನಕಲಿ ತುಪ್ಪದಲ್ಲಿ ಏನೆಲ್ಲಾ ಮಿಶ್ರಣ ಮಾಡ ಲಾಗಿದೆ ಎಂಬುದನ್ನು ಪತ್ತೆ ಹಚ್ಚಲು ಮಾದರಿಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ದಂಪತಿ ವಿರುದ್ಧ ಹಿಂದೆ ಮೈಸೂರಿನಲ್ಲಿಯೂ ಇದೇ ರೀತಿಯ ನಕಲಿ ಉತ್ಪನ್ನ ತಯಾರಿಕೆಯ ಕೇಸ್ ದಾಖಲಾಗಿತ್ತು ಎನ್ನಲಾಗಿದೆ.


