ಕೋಟ್ಯಂತರ ವಂಚನೆ ಪ್ರಕರಣದ ಆರೋಪಿ ಪರ ಠಾಣೆಗೆ ಬಂದು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ನಕಲಿ ವಕೀಲನನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.
ರಾಜಾಜಿನಗರ ನಿವಾಸಿ ಯೋಗಾನಂದ್ (52) ಬಂಧಿತ. ಪ್ರಭಾವಿ ರಾಜಕಾರಣಿಗಳ ಆಪ್ತೆಯೆಂದು ನಂಬಿಸಿ ವಂಚಿಸಿದ್ದ ಪ್ರಕರಣದ ಆರೋಪಿ ಸವಿತಾ ಪರ ವಕೀಲ ಎಂದು ಹೇಳಿಕೊಂಡು ಬಸವೇಶ್ವರ ನಗರ ಠಾಣೆಗೆ ತೆರಳಿದ್ದ ಆರೋಪಿ, ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಹೈಡ್ರಾಮಾ ಸೃಷ್ಟಿಸಿದ್ದ.
ಪ್ರೊಫೆಸರ್ ಆಗಿರುವ ಯೋಗಾನಂದ್, ಸವಿತಾ ಪರ ವಕೀಲನೆಂದು ಹೇಳಿಕೊಂಡು ಬಸವೇಶ್ವರ ನಗರ ಠಾಣೆ ಬಳಿ ತೆರಳಿದ್ದ. ಯಾವ ಆಧಾರದಲ್ಲಿ ಬಂಧಿಸಿದ್ದೀರಿ? ಎನ್ನತ್ತಾ, ಪೊಲೀಸರ ವಶದಲ್ಲಿದ್ದ ಆರೋಪಿ ಸವಿತಾಳ ಬಳಿಯಿದ್ದ ಮನೆ ಬೀಗವನ್ನು ಪಡೆದುಕೊಂಡು ಹೋಗಲು ಯತ್ನಿಸಿದ್ದ. ಬೀಗ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ತಡೆದಾಗ ಪೊಲೀಸ್ ಸಿಬ್ಬಂದಿಗೆ ಬೆದರಿಸಿದ್ದ. ಸ್ಥಳದಲ್ಲಿದ್ದ ಕೆ.ಪಿ.ಅಗ್ರಹಾರ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜ್, ಈ ಹಿಂದೆ ತಾವು ಬಸವೇಶ್ವರ ನಗರ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಆರೋಪಿಯನ್ನ ವೃದ್ದೆಯ ಮೇಲೆ ಹಲ್ಲೆಗೈದ ಪ್ರಕರಣದಲ್ಲಿ ಬಂಧಿಸಿದ್ದನ್ನು ನೆನಪಿಸಿಕೊಂಡಿದ್ದರು. ಕೂಡಲೇ ವಶಕ್ಕೆ ಪಡೆದು ವಿಚಾರಿಸಿದಾಗ , ತಾನು ವಕೀಲನಲ್ಲ, ಫ್ರೊಫೆಸರ್ ಎಂದು ಬಾಯ್ಬಿಟ್ಟಿದ್ದಾನೆ. ಠಾಣೆಯ ಬಳಿ ರಂಪಾಟ ಸೃಷ್ಟಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಯೋಗಾನಂದ್‌ನನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಭಾವಿ ರಾಜಕಾರಣಿಗಳ ಸಂಬಂಧಿ ಸೋಗಿನಲ್ಲಿ ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ನಂಬಿಸಿ ಮಹಿಳೆಯರಿಗೆ 30 ಕೋಟಿಗೂ ಹೆಚ್ಚು ವಂಚನೆ ಮಾಡಿದ್ದ ಸವಿತಾ (49) ಮತ್ತು ಆಕೆಯ ಸಹಚರನಾದ ಪುನೀತ್ (28) ಎಂಬಾತನನ್ನ ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದರು. ತನ್ನ ಪತಿ ಹಾಗೂ ಸಂಬಂಧಿಕರು ವಿದೇಶದಲ್ಲಿ ನೆಲೆಸಿದ್ದು, ಕಡಿಮೆ ಬೆಲೆಗೆ ಚಿನ್ನ ತರಿಸಿ ಕೊಡುವುದಾಗಿ ಉದ್ಯಮದಲ್ಲಿ ಹೂಡಿಕೆ ಮಾಡಿದರೆ ಲಾಭ ನೀಡುವುದಾಗಿ ಹಣ ಪಡೆದು ವಂಚಿಸಿದ್ದಳು.
ಆರೋಪಿ ಸವಿತಾಳ ಮಾತು ನಂಬಿ 95 ಲಕ್ಷ ರೂ. ನೀಡಿ ವಂಚನೆಗೊಳಗಾಗಿದ್ದ ಕುಸುಮಾ ಬಸವೇಶ್ವರ ನಗರ ಠಾಣೆಗೆ ದೂರು ನೀಡಿದ್ದರು. ಆರೋಪಿಯು 20ಕ್ಕೂ ಹೆಚ್ಚು ಮಹಿಳೆಯರಿಗೆ ಸುಮಾರು 30 ಕೋಟಿ ರೂ. ವಂಚಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.