ಕುಂಭಮೇಳದಲ್ಲಿ ಸ್ನಾನ ಮಾಡುತ್ತಿರುವ ರೀತಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಫೊಟೋ ಹರಿಬಿಟ್ಟ ಪ್ರಶಾಂತ್ ಸಂಬರ್ಗಿ ವಿರುದ್ಧ ನಟ ಪ್ರಕಾಶ್ ರಾಜ್ ಬೆಂಗಳೂರಿನ ಲಕ್ಷ್ಮಿಪುರಂ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಶಾಂತ್ ಸಂಬರಗಿ ನನ್ನ ಖ್ಯಾತಿಗೆ ಕುತ್ತು ತರುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಪೇಸ್‌ಬುಕ್ನಲ್ಲಿ ನನ್ನ ಹೆಸರು ಬಳಸಿ ಕೃತಕ ಬುದ್ದಿಮತ್ತೆಯ ಮೂಲಕ ಸೃಷ್ಟಿಸಿದ ಭಾವಚಿತ್ರ ಬಳಸಿದ್ದು, ಸುಳ್ಳು ಶೀರ್ಷಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಶಾಂತ್ ಸಂಬರಗಿಗೆ ಇ ಮೇಲ್ ಮೂಲಕ ನೋಟಿಸ್ ಕಳುಹಿಸಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದರು.
ಪ್ರಶಾಂತ್ ಸಂಬರಗಿ ನಟಿಯರೂ ಸೇರಿದಂತೆ ಅನೇಕರಿಗೆ ಈ ರೀತಿ ತೊಂದರೆ ನೀಡಿದ್ದು, ಆತನಿಗೆ ಪಾಠ ಕಲಿಸಬೇಕು, ಸಾಮಾಜಿಕ ಜಾಲತಾಣದಲ್ಲಿ ನಕಲಿ ಸುದ್ದಿ ಹರಡುವವರಿಗೂ ಇದೊಂದು ಪಾಠವಾಗಬೇಕು ಎಂಬ ಕಾರಣಕ್ಕೆ ದೂರು ನೀಡಿದ್ದೇನೆ ಎಂದು ನಟ ಪ್ರಕಾಶ್ ರಾಜ್ ತಿಳಿಸಿದರು.
ತಪ್ಪು ಪ್ರಚಾರ ಮಾಡುವುದು, ಅನುಮತಿ ಇಲ್ಲದೆ ಯಾರದೋ ಫೋಟೊಗಳನ್ನು ಬಳಸುವುದು ಅಕ್ಷಮ್ಯ ಅಪರಾಧ’ ಎಂದರು.
ಕುಂಭಮೇಳದಲ್ಲಿನ ಪುಣ್ಯಸ್ನಾನದ ಬಗ್ಗೆ ಪ್ರಶ್ನಿಸಿದಾಗ ‘ಸ್ನಾನ ಮಾಡುವುದರಲ್ಲಿ ತಪ್ಪೇನಿದೆ. ಅದು ಅವರ ನಂಬಿಕೆ. ನನಗೆ ದೇವರ ಮೇಲೆ ನಂಬಿಕೆಯಿಲ್ಲ. ಮನುಷ್ಯರ ಮೇಲೆ ನಂಬಿಕೆ. ದೇವರಿಲ್ಲದೆ ಬದುಕಬಹುದು ಆದರೆ, ಮನುಷ್ಯರಿಲ್ಲದೆ ಬದುಕಲು ಸಾಧ್ಯವಿಲ್ಲ. ಹಾಗೆಂದು ಅವರ ನಂಬಿಕೆ ಪ್ರಶ್ನಿಸುವುದಿಲ್ಲ. ಆದರೆ ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ತಪ್ಪು ಎಂದರು.