ಎರಡು ವರ್ಷಗಳಿಂದ ನಕಲಿ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಪೊಲೀಸ್ ಅಕಾಡೆಮಿಯಲ್ಲಿಯೇ ಇದ್ದು ಪೊಲೀಸರನ್ನೇ ಯಾಮಾರಿಸುತ್ತಿದ್ದ ಘಟನೆ ರಾಜಸ್ಥಾದಲ್ಲಿ ನಡೆದಿದೆ.
ಪೊಲೀಸ್ ಸಮವಸ್ತ್ರ ಧರಿಸಿ ರಾಜಸ್ಥಾನ ಪೊಲೀಸ್ ಅಕಾಡೆಮಿಯಲ್ಲಿಯೇ ತರಬೇತಿಯಲ್ಲಿ ಪಾಲ್ಗೊಂಡಿದ್ದ ಆಕೆ ಹಿರಿಯ ಅಧಿಕಾರಿಗಳ ಜೊತೆ ಫೋಟೊ ತೆಗೆಸಿಕೊಂಡಿದ್ದಳು, ಕೊನೆಗೂ ನಕಲಿ ಮಹಿಳಾ ಪೊಲೀಸ್ ಜೈಲು ಸೇರಿದ್ದಾಳೆ.
ಈ ಐನಾತಿ ನಕಲಿ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಹೆಸರು ಮೋನಾ ಬುಗಾಲಿಯಾ ಅಲಿಯಾಸ್ ಮೋಲಿ. ಜೈಪುರದಲ್ಲಿ ಬಂದ ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರೇ ಆಘಾತಕ್ಕೆ ಒಳಗಾಗಿದ್ದಾರೆ. ಸಿಕ್ಕರ್ ಜಿಲ್ಲೆಯಲ್ಲಿ ಈಕೆಯನ್ನು ಬಂಧಿಸಿದ ನಂತರ 2023ರಿಂದ ಈಕೆ ಪೊಲೀಸ್ ಸಮವಸ್ತ್ರದಲ್ಲಿ ಪೊಲೀಸರ ಜೊತೆಗಿದ್ದು, ಎಲ್ಲರನ್ನೂ ಯಾಮಾರಿಸಿದ್ದಾಳೆ.
ಸಬ್ ಇನ್ ಸ್ಪೆಕ್ಟರ್ ಪ್ರವೇಶ ಪರೀಕ್ಷೆ ಪಾಸ್ ಆಗದೆ ಮೋಲಿ ಪೊಲೀಸರ ತರಬೇತಿ ಕೇಂದ್ರಕ್ಕೆ ಪ್ರವೇಶಿಸಿದ್ದಳು. ಪೊಲೀಸರು ಆಕೆಯ ಕೋಣೆಯನ್ನು ಪರಿಶೀಲಿಸಿದಾಗ ಮೂರು ರೀತಿಯ ಪೊಲೀಸ್ ಸಮವಸ್ತ್ರ ಹಾಗೂ 7 ಲಕ್ಷ ರೂ. ನಗದು ಹಾಗೂ ಪರೀಕ್ಷಾ ಮಾದರಿ ಪತ್ರಿಕೆಗಳು, ನಕಲಿ ಗುರುತು ಪತ್ರಗಳು ಪತ್ತೆಯಾಗಿದೆ.
ರಾಜಸ್ಥಾನ ನಗೌರ್ ಜಿಲ್ಲೆಯ ನಿಂಬಾ ಕೇ ದಾಸ್ ಗ್ರಾಮದ ಟ್ರಕ್ ಚಾಲಕನ ಪುತ್ರಿ ಆಗಿರುವ ಮೋಲಿ 2021ರಲ್ಲಿ ಸಬ್ ಇನ್ ಸ್ಪೆಕ್ಟರ್ ಹುದ್ದೆಗೆ ಪರೀಕ್ಷೆ ಬರೆದಿದ್ದಳು. ಆದರೆ ಪರೀಕ್ಷೆಯಲ್ಲಿ ಉತ್ತೀರ್ಣ ಆಗಿರಲಿಲ್ಲ. ಆ ನಂತರ `ಮೋಲಿ ದೇವಿ’ ಹೆಸರಿನಲ್ಲಿ ನಕಲಿ ಗುರುತುಪತ್ರ ಮಾಡಿಸಿಕೊಂಡ ಮೋಲಿ ಸಾಮಾಜಿಕ ಜಾಲತಾಣದಲ್ಲಿ ತಾನೊಬ್ಬ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಎಂದು ಬಿಂಬಿಸಿಕೊಂಡಳು.
ಕ್ರೀಡಾ ಮೀಸಲಿನಿಂದ ಸಬ್ ಇನ್ ಸ್ಪೆಕ್ಟರ್ ಆಗಿ ನೇಮಕಗೊಂಡಿದ್ದಾಗಿ ಹೇಳಿಕೊಂಡು ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಗಳಾಗಿ ನೇಮಕಗೊಂಡವರ ವಾಟ್ಸಪ್ ಗ್ರೂಪ್ ಗೆ ಸೇರಿಕೊಂಡಳು. ಈ ಮೂಲಕ ಪೊಲೀಸ್ ಪರೇಡ್ ಮೈದಾನ ಪ್ರವೇಶಿಸಿ ತರಬೇತಿಗಳಲ್ಲಿ ಪಾಲ್ಗೊಳ್ಳುತ್ತಿದ್ದಳು. ನಂತರ ಹಿರಿಯ ಅಧಿಕಾರಿಗಳ ಜೊತೆ ಫೋಟೊ ತೆಗೆಸಿಕೊಳ್ಳುತ್ತಿದ್ದಳು. ವೃತ್ತಿಜೀವನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ ಭಾಷಣ ಕೂಡ ಮಾಡುತ್ತಿದ್ದಳು.
ರಾಜಸ್ಥಾನ ಅಕಾಡೆಮಿಯ ಹೊರಾಂಗಣ ತರಬೇತಿಯಲ್ಲಿ ಪಾಲ್ಗೊಳ್ಳುತ್ತಿದ್ದರೂ ಕಟ್ಟುನಿಟ್ಟಾದ ಭದ್ರತೆಯ ಕಾರಣ ಒಳಾಂಗಣ ತರಬೇತಿಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.
ಹೆತ್ತವರು, ನಾಲ್ವರು ಸೋದರಿಯರಿಗಾಗಿ ಸಂಬಳ ಹಾಗೂ ಹಣಕಾಸಿನ ಅಗತ್ಯಗಳಿಗಾಗಿ ಪೊಲೀಸ್ ಅಧಿಕಾರ ಬಳಸಿ ಹಣ ವಸೂಲು ಮಾಡುತ್ತಿರುವುದಾಗಿ ಮೋಲಿ ವಿಚಾರಣೆ ವೇಳೆ ತಿಳಿಸಿದ್ದಾಳೆ.