ಕಾರವಾರದ ದಾಂಡೇಲಿಯ ಗಾಂಧಿನಗರ ಬಡಾವಣೆಯ ಮನೆಯೊಂದರಲ್ಲಿ ಕಂತೆ ಕಂತೆ ನಕಲಿ ಕರೆನ್ಸಿ ನೋಟುಗಳು ಪತ್ತೆಯಾದ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಿ ಲಕ್ನೋದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಗೋವಾ,ಹೈದರಾಬಾದ್ ಎಂದು ಪೊಲೀಸರನ್ನು ಯಾಮಾರಿಸಿದ್ದ ಆರೋಪಿ ಅರ್ಷದ್ ಅಂಜುಂ ಖಾನ್‌ನನ್ನು ಉತ್ತರ ಪ್ರದೇಶದ ಲಖನೌನಲ್ಲಿ ಬಂಧಿಸಿ ನಗರಕ್ಕೆ ಕರೆತಂದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮನೆಯಲ್ಲಿ ನಕಲಿ ನೋಟುಗಳ ಪತ್ತೆಯಾದ 10 ದಿನಗಳ ಬಳಿಕ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರಂಭದಲ್ಲಿ, ನಕಲಿ ನೋಟಿನ ಕಂತೆಗಳ ಮೇಲೆ, ‘ಮೂವಿ ಪರ್ಪಸ್ ಓನ್ಲಿ’ ಎಂದು ಬರೆದಿದ್ದರಿಂದ ಪೊಲೀಸರು ಸುಮ್ಮನಾಗಿದ್ದರು. ಆದರೆ ಆರೋಪಿ ಹೈದರಾಬಾದ್‌ನಲ್ಲಿದ್ದೇನೆ, ಗೋವಾದಲ್ಲಿದ್ದೇನೆ ಎಂದು ತನಿಖೆಯ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದ.
ಆರೋಪಿಯ ಮೊಬೈಲ್ ಟವರ್ ಲೊಕೇಶನ್ ಹಾಗೂ ತಾಂತ್ರಿಕ ಸಹಾಯದ ಮೂಲಕ ಆತನನ್ನು ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ದಾಂಡೇಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದು, ನ್ಯಾಯಾಲಯ ಸಮ್ಮತಿಸಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಯ ವಿಚಾರಣೆ ತೀವ್ರಗೊಳಿಸಲಾಗಿದೆ.
ಗಾಂಧಿನಗರದ ನೂರಜಾನ್ ಜುಂಜುವಾಡ್ಕರ ಎಂಬವರ ಮನೆಯಲ್ಲಿ ಅರ್ಷದ್ ಬಾಡಿಗೆಗೆ ವಾಸವಾಗಿದ್ದ. ಕಳೆದ ಒಂದು ತಿಂಗಳಿನಿಂದ ಈತ ಆ ಮನೆಯಲ್ಲಿ ಇಲ್ಲದೇ ಇರುವುದನ್ನು ಗಮನಿಸಿ ಮತ್ತು ಆ ಮನೆಯ ಹಿಂಬದಿಯ ಬಾಗಿಲ ಚಿಲಕ ಸರಿ ಹಾಕದೇ ಇರುವುದನ್ನು ತಿಳಿದು, ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ದಾಂಡೇಲಿ ನಗರ ಠಾಣೆಯ ಪೊಲೀಸರು ಮನೆಗೆ ಬಂದು ಬಾಗಿಲು ತೆರೆಯುತ್ತಿದ್ದಂತೆಯೇ, 500 ರೂ. ಮುಖ ಬೆಲೆಯ ಕಂತೆ ಕಂತೆ ನೋಟುಗಳು ಕಾಣಿಸಿದ್ದವು.
14 ಕೋಟಿ ರೂ. ಗೂ ಹೆಚ್ಚು ಮುಖಬೆಲೆಯ ನಕಲಿ ನೋಟುಗಳು ಕಾಣಿಸಿದ್ದವು. ಅವುಗಳ ಬಂಡಲ್ ಮೇಲೆ ‘ಮೂವಿ ಪರ್ಪಸ್ ಓನ್ಲಿ’ ಎಂದು ಬರೆದಿತ್ತು. ನಂತರ ಅರ್ಷದ್ಗೆ ಕರೆ ಮಾಡಿ ಪೊಲೀಸರು ವಿಚಾರಿಸಿದ್ದರು. ಆತ ಗೋವಾದಲ್ಲಿ ಇದ್ದು ಬರುವುದಾಗಿ ಮಾಹಿತಿ ನೀಡಿದ್ದ. ಆತ ಯಾಮಾರಿಸುತ್ತಿದ್ದಾನೆ ಎಂಬುದು ಅರಿವಾದ ಕೂಡಲೇ ಪೊಲೀಸರು ಮೊಬೈಲ್ ಟವರ್ ಲೊಕೇಶನ್ ಟ್ರೇಸ್ ಮಾಡಿದ್ದಾರೆ. ಆರೋಪಿ ಲಖನೌನಲ್ಲಿರುವುದು ಗೊತ್ತಾಗಿ ಬಂಧಿಸಿದ್ದಾರೆ.