ಬೆಂಗಳೂರು: ಸಮಸ್ಯೆ ಎದುರಾದಾಗ ವಿಮುಖರಾಗದೇ ಆತ್ಮವಿಶ್ವಾಸ ಮತ್ತು ಛಲದಿಂದ ಎದುರಿಸಿದರೆ ಯಶಸ್ಸಿನ ಹಾದಿ ಸುಗಮವಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.
ನಗರದ ಸೌಂದರ್ಯ ಸೆಂಟ್ರಲ್ ಶಾಲೆಯಲ್ಲಿ ಕರ್ನಾಟಕದ ಪರಂಪರೆಯನ್ನು ಪ್ರತಿಬಿಂಬಿಸುವ “ದರೋಹರ” ವಾರ್ಷಿಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ವರ್ಷ 200 ದಿನಗಳ ಕಾಲ ಮಳೆ ಬಾರದ ಸಂದರ್ಭದಲ್ಲಿ ತಮಗೆ ಬೆಂಗಳೂರು ನೀರು ಸರಬರಾಜು ಮತ್ತು ಜಲಮಂಡಳಿ ಜವಾಬ್ದಾರಿ ನೀಡಲಾಗಿತ್ತು. ಇಂತಹ ಸಂಕಷ್ಟ ಸಂದರ್ಭದಲ್ಲಿ ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಸವಾಲನ್ನು ಅತ್ಯಂತ ಸಮರ್ಥ ಮತ್ತು ಜವಾಬ್ದಾರಿಯಿಂದ ಎದುರಿಸಲಾಯಿತು. ಬೆಂಗಳೂರಿನ ಸಮಸ್ತ ನಾಗರಿಕರು ತಮಗೆ ಬೆಂಬಲ ನೀಡಿದರು. ಸವಾಲು ಎದುರಾದಾಗ ಹೆದರಿ ಕೂರಬಾರದು. ದಿಟ್ಟತನದಿಂದ ಎದುರಿಸಿದರೆ ಜೀವನದಲ್ಲಿ ಆತ್ಮ ವಿಶ್ವಾಸ ಹೆಚ್ಚುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವ ಜನಾಂಗ ಆತ್ಮ ವಿಶ್ವಾಸ ಕಳೆದುಕೊಳ್ಳುತ್ತಿರುವುದು ವಿಷಾದನೀಯ ಎಂದರು.
ಸಣ್ಣ ವಯಸ್ಸಿನಿಂದಲೇ ಇದರ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ಶಾಲೆಗಳ ಕಾರ್ಯಕ್ರಮಗಳಲ್ಲಿ ತನ್ನ ಮಾದರಿಗಳನ್ನು ಪ್ರದರ್ಶಿಸುವ ಕಾರ್ಯಕ್ಕೆ ಮುಂದಾಗಿದೆ. ವಿದ್ಯಾರ್ಥಿಗಳು ನೀರಿನ ಸಮರ್ಪಕ ಬಳಕೆ ಹಾಗೂ ಉಳಿತಾಯದ ಬಗ್ಗೆ ಅರಿವು ಹೆಚ್ಚಿಸಿಕೊಳ್ಳಬೇಕು. ಮಕ್ಕಳು ನೀರು ಸಮರ್ಪಕ ಬಳಕೆ ಹಾಗೂ ಉಳಿತಾಯದ ಬಗ್ಗೆ ತಮ್ಮ ಪೋಷಕರ ಮನವೊಲಿಸಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿ ಸಮುದಾಯ ಕರ್ನಾಟಕದ ಇತಿಹಾಸ, ಸಂಸ್ಕೃತಿ, ಪರಂಪರೆಯನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಎಲ್ಲರೂ ಅತ್ಯಂತ ಪ್ರಾಚೀನ ಕನ್ನಡ ಭಾಷೆಯ ಬಗ್ಗೆ ತಿಳಿದುಕೊಳ್ಳಬೇಕು. ಕನ್ನಡ 8 ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆ ಹೊಂದಿದೆ. 1600 ವರ್ಷಗಳ ಹಿಂದೆ ರಾಜ್ಯದ ಮೇಲೆ ಯುದ್ಧ ಮಾಡಲು ಸಮುದ್ರ ಮಾರ್ಗವಾಗಿ ಬಂದ ಅರಬ್ಬರನ್ನು ಇಮ್ಮಡಿ ಪುಲಿಕೇಶಿ ಅತ್ಯಂತ ಯಶಸ್ವಿಯಾಗಿ ಎದುರಿಸಿದ ಇತಿಹಾಸ ನಮ್ಮ ಮುಂದೆ ಇದೆ. ರಾಜ್ಯವನ್ನಾಳಿದ ಅರಸರು, ಡ್ರಾವಿಡ ವಾಸ್ತುಶಿಲ್ಪದ ವೈವಿಧ್ಯತೆಯನ್ನು ಯುವ ಜನಾಂಗ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸೌಂದರ್ಯ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಸೌಂದರ್ಯ ಮಂಜಪ್ಪ, ಸಿಇಓ ಕೀರ್ತನ್ ಕುಮಾರ್ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.