ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹೆಸರು ಬಳಸಿಕೊಂಡು ಸೈಬರ್ ವಂಚಕರು ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ ಜನರನ್ನು ವಂಚಿಸಲು ಪ್ರಯತ್ನ ನಡೆಸಿರುವ ಘಟನೆ ಬಹಿರಂಗಗೊಂಡಿದೆ. ಸೀಮಂತ್ ಕುಮಾರ್ ಸಿಂಗ್ ಹೆಸರಿನಲ್ಲಿ ಹಿಂದಿ ಭಾಷೆಯಲ್ಲಿ ನಕಲಿ ಖಾತೆ ರಚಿಸಿ ಗಣ್ಯರೊಂದಿಗೆ ತೆಗೆದಿರುವ ಫೋಟೋಗಳನ್ನು ಪೋಸ್ಟ್ ಮಾಡಿ ಜನರ ವಿಶ್ವಾಸ ಗಳಿಸಲು ವಂಚಕರು ಮುಂದಾಗಿದ್ದಾರೆ.
ಪೊಲೀಸ್ ಆಯುಕ್ತರೇ ಪೋಸ್ಟ್ ಮಾಡುತ್ತಿದ್ದಾರೆಂದು ನಂಬಿದ ಕೆಲವರು ಆ ಖಾತೆಗೆ ಪ್ರತಿಕ್ರಿಯೆ ನೀಡಿದ್ದು, ಬಳಿಕ ಖಾಸಗಿ ಸಂದೇಶಗಳ ಮೂಲಕ ಹಣ ಕೇಳುವ ಪ್ರಯತ್ನವೂ ನಡೆದಿದೆ ಎನ್ನಲಾಗಿದೆ. ಮೊದಲಿಗೆ ನಂಬಿಕೆ ಮೂಡಿಸಿ ನಂತರ ಹಣ ದೋಚುವ ಉದ್ದೇಶದಿಂದಲೇ ನಕಲಿ ಖಾತೆ ಸೃಷ್ಟಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಹಿಂದೆ ಪೊಲೀಸ್ ಅಧಿಕಾರಿಗಳಾದ ಅಲೋಕ್ ಕುಮಾರ್ ಹಾಗೂ ಭೀಮಾಶಂಕರ ಅವರ ಹೆಸರಿನಲ್ಲಿ ನಕಲಿ ಸಾಮಾಜಿಕ ಜಾಲತಾಣ ಖಾತೆಗಳನ್ನು ತೆರೆಯಲಾಗಿತ್ತು. ಬೆಂಗಳೂರು ನಗರ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಕಲಿ ಖಾತೆಗಳನ್ನು ಸೃಷ್ಟಿಸಿದವರ ಪತ್ತೆಗೆ ತನಿಖೆ ಆರಂಭಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಗಣ್ಯರ ಹೆಸರಿನ ಖಾತೆಗಳನ್ನು ಕಂಡಕೂಡಲೇ ಸಾರ್ವಜನಿಕರು ಪರಿಶೀಲನೆ ನಡೆಸಿ ಖಚಿತಪಡಿಸಿಕೊಳ್ಳಬೇಕು, ಸಂಶಯಾಸ್ಪದವಾಗಿದ್ದರೆ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.


