ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ವಿವಾಹಿತ ಮಹಿಳೆಗೆ ಆಕೆಯ ಪ್ರಿಯಕರ ಚಾಕುವಿನಿಂದ ಮನ ಬಂದಂತೆ ಚುಚ್ಚಿ ಸಾಯಿಸಿದ ಬಳಿಕ ತಾನೂ ಚಾಕು ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪ್ರೇಯಸಿಗೆ ಬೇರೆಯವನ ಜೊತೆ ಮದುವೆಯಾದ ಬಳಿಕವೂ ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಆನಂದ ಸುತಾರ್ ಎಂಬಾತ, ಪ್ರೇಯಸಿಗೆ ನೀನು ನನ್ನ ಪತ್ನಿಯಂತೆ ನನ್ನ ಮಾತು ಕೇಳಿಕೊಂಡು ಇರಬೇಕು ಎಂದು ಪೀಡಿಸುತ್ತಿದ್ದ ಎನ್ನಲಾಗಿದೆ.
ಖಾನಾಪುರ ಬೀಡಿ ಗ್ರಾಮದ ರೇಷ್ಮಾ ತಿರವಿರ (29) ಕೊಲೆಯಾದ ಮಹಿಳೆ. ಪ್ರೇಯಸಿ ಸಾಯುತ್ತಿದ್ದಂತೆ ಚಾಕು ಚುಚ್ಚಿಕೊಂಡು ತೀವ್ರ ರಕ್ತಸ್ರಾವಕ್ಕೆ ಒಳಗಾದ ಆನಂದ ಸುತಾರ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತ ಚಿಕಿತ್ಸೆ ಫಲಿಸದೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಮದುವೆ ಬಳಿಕವೂ ರೇಷ್ಮಾ ಜೊತೆಗೆ 3 ವರ್ಷಗಳಿಂದ ಆತ ಸಂಬಂಧ ಹೊಂದಿದ್ದ. ಆತನಿಗೆ ಮೂವರು ಮಕ್ಕಳಿದ್ದರೆ, ರೇಷ್ಮಾಗೆ ಇಬ್ಬರು ಮಕ್ಕಳಿದ್ದಾರೆ. ಒಂದೇ ಊರಿನ, ಒಂದೇ ಕಾಲನಿಯ ಇಬ್ಬರ ಮಧ್ಯೆ ಹಲವು ವರ್ಷಗಳಿಂದ ಸ್ನೇಹವಿತ್ತು, ಮದುವೆಯ ಬಳಿಕ ಮೂರು ವರ್ಷಗಳಿಂದ ಅವರಿಬ್ಬರ ಮಧ್ಯೆ ಅನೈತಿಕ ಸಂಬಂಧವಿತ್ತು.
ಕಳೆದ ತಿಂಗಳಷ್ಟೇ ರೇಷ್ಮಾ ಮತ್ತು ಆನಂದ ರೇಷ್ಮಾನ ಪತಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ನಂದಗಡ ಪೊಲೀಸರಿಗೆ ರೇಷ್ಮಾ ಪತಿ ಶೀವು ತಿರವಿರ ಮಾಹಿತಿ ನೀಡಿದ್ದು, ಪೊಲೀಸರ ವಾರ್ನ್ ಬಳಿಕ ಆನಂದನಿಂದ ಆಕೆ ಅಂತರ ಕಾಯ್ದುಕೊಂಡಿದ್ದರು. ಈ ಕಾರಣಕ್ಕೆ ಸಿಟ್ಟಿಗೆದ್ದು ಮನೆಯ ಹಿಂಬಾಗಿಲಿನಿಂದ ಹೋಗಿ ಮಗಳ ಎದುರೆ ಆಕೆಯನ್ನು ಹತ್ಯೆ ಮಾಡಿದ್ದಾನೆ.