Menu

ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ: ಮೂವರ ಬಂಧನ

explosive

ಬೆಂಗಳೂರು: ಕಲಾಸಿಪಾಳ್ಯ ಬಸ್‌ ನಿಲ್ದಾಣದಲ್ಲಿ ಜಿಲೆಟಿನ್‌ ಹಾಗೂ ಡಿಟೊನೇಟರ್‌ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ.

ಗಣೇಶ್, ಶಿವ ಹಾಗೂ ಮುನಿಯಪ್ಪ ಬಂಧಿತ ಆರೋಪಿಗಳು. ಜುಲೈ 23ರಂದು ಮಧ್ಯಾಹ್ನ ಕಲಾಸಿಪಾಳ್ಯದ ಶೌಚಾಲಯದ ಬಳಿ ಜಿಲೆಟಿನ್‌, ಡಿಟೊನೇಟರ್‌ ಪತ್ತೆಯಾಗಿದ್ದವು. ಸ್ಥಳ ಪರಿಶೀಲನೆ ನಡೆಸಿದ್ದ ಪೊಲೀಸರು 6 (ಆರ್.ಇ.ಎಕ್ಸ್ – 90) ಜಿಲೆಟಿನ್ ಜೆಲ್, 12 ಎಲೆಕ್ಟ್ರಿಕ್ ಡಿಟೋನೇಟರ್‌ಗಳನ್ನ ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಆರೋಪಿಗಳ ಪತ್ತೆಗಾಗಿ 5 ಪ್ರತ್ಯೇಕ ತಂಡಗಳನ್ನ ರಚಿಸಲಾಗಿತ್ತು‌.

‘ಬೋರ್‌ವೆಲ್ ಕಾಮಗಾರಿಗಾಗಿ ಕೋಲಾರದಿಂದ ಸ್ಫೋಟಕಗಳನ್ನ‌ ಖರೀದಿಸಿ ತರಲಾಗಿತ್ತು. ಚಾಮರಾಜನಗರದ ಕೊಳ್ಳೆಗಾಲಕ್ಕೆ ಕೊಂಡೊಯ್ಯುತ್ತಿದ್ದ ಆರೋಪಿಗಳು ಶೌಚಾಲಯಕ್ಕೆ ಹೋಗಿ ವಾಪಸ್​​ ಬರುವಷ್ಟರಲ್ಲಿ ಪೊಲೀಸರು ಬ್ಯಾಗ್‌ಗಳನ್ನ ತಪಾಸಣೆಗೊಳಪಡಿಸುತ್ತಿದ್ದರು. ಅದರಿಂದ ಗಾಬರಿಯಾಗಿ ಬ್ಯಾಗ್‌ಗಳನ್ನ ಬಿಟ್ಟು ಪರಾರಿಯಾಗಿದ್ದುದಾಗಿ ತನಿಖೆಯ ಸಂದರ್ಭದಲ್ಲಿ ಆರೋಪಿಗಳು ತಿಳಿಸಿದ್ದಾರೆ’ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಕಲ್ಲು ಗಣಿಗಾರಿಕೆ, ಬೋರ್‌ವೆಲ್ ಕಾಮಗಾರಿ ವೇಳೆ ಸ್ಫೋಟಕಗಳನ್ನ ಬಳಸಲು ಕೆಲವು ನಿಬಂಧನೆಗಳಿವೆ. ಪರವಾನಗಿ ಇಲ್ಲದೇ ಬಳಸುವಂತಿಲ್ಲ. ಆದರೆ ಆರೋಪಿಗಳು ಯಾವುದೇ ನಿಯಮ ಪಾಲಿಸದೇ, ಸೂಕ್ತ ಸಂಗ್ರಹಣೆ ವ್ಯವಸ್ಥೆ ಹೊಂದಿಲ್ಲ ಎಂದು ತಿಳಿದು ಬಂದಿದೆ. ಪ್ರಕರಣದಲ್ಲಿ ಇಲ್ಲಿಯವರೆಗೆ ಒಟ್ಟು 22 ಜೀವಂತ (ಆರ್.ಇ.ಎಕ್ಸ್-90) ಜೆಲೆಟಿನ್ ಕಡ್ಡಿಗಳು ಹಾಗೂ 30 ಎಲೆಕ್ಟ್ರಿಕ್ ಡಿಟೋನೇಟರ್‌ಗಳನ್ನ ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳ ಪತ್ತೆಗೂ ಬಲೆ ಬೀಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *