ಲಕ್ನೋದ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕಾರ್ಖಾನೆ ಮಾಲೀಕ ಆಲಂ ಸೇರಿ ಏಳು ಮಂದಿ ಮೃತಪಟ್ಟಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.
ಅಧಿಕಾರಿಗಳು ಸ್ಥಳಕ್ಕೆತೆರಳಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಕಾರ್ಖಾನೆಯೊಳಗೆ ಕೆಲಸ ಮಾಡುತ್ತಿದ್ದ ಆಲಂ, ಅವರ ಪತ್ನಿ ಮತ್ತು ಅವರ ಇಬ್ಬರು ಪುತ್ರರು ಸ್ಫೋಟದಲ್ಲಿ ಅಸು ನೀಗಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿ ಪರಿಹಾರ ಕಾರ್ಯ ಕೈಗೊಳ್ಳುವಂತೆ ಆದೇಶಿಸಿದ್ದಾರೆ.
ಸ್ಫೋಟದಿಂದಾಗಿ ಕಾರ್ಖಾನೆಯ ಗೋಡೆಗಳು ಕುಸಿದಿವೆ, ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ವಾಹನಗಳು ಮತ್ತು ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಸ್ಫೋಟದ ನಂತರ ಸುತ್ತಲ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿದ್ದು, ಅಲ್ಲಿದ್ದ ಮನೆಗಳಿಂದ ಜನರು ಹೊರಕ್ಕೆ ಓಡಿ ಬಂದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಅಗ್ನಿಶಾಮಕ ದಳ, ಆಂಬ್ಯುಲೆನ್ಸ್‌ಗಳು ಮತ್ತು ಸ್ಥಳೀಯ ಪೊಲೀಸರನ್ನು ಒಳಗೊಂಡ ರಕ್ಷಣಾ ತಂಡಗಳು ಸ್ಥಳದಲ್ಲಿ ರಕ್ಷಣಾ ಕಾರ್ಯ ನಿರತವಾಗಿವೆ, ಪಟಾಕಿ ಕಾರ್ಖಾನೆ ಕಾರ್ಯನಿರ್ವಹಿಸುತ್ತಿದ್ದ ಮನೆಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಅನಿಂದ್ಯ ವಿಕಾರಂ ಸಿಂಗ್ ಹೇಳಿದ್ದಾರೆ.