Menu

ನಾನಾ ಆಮಿಷವೊಡ್ಡಿ  ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ ಮಾಜಿ ಪಿಡಿಒ ಬೆಂಗಳೂರು ಪೊಲೀಸ್‌ ಬಲೆಗೆ

ಸರ್ಕಾರಿ ಕೆಲಸ ಕೊಡಿಸುವ ಆಮಿಷ, ಚಿನ್ನದ ಉದ್ಯಮ ಹಾಗೂ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಎರಡು ಪಟ್ಟು ಲಾಭ ಮತ್ತಿತರ ಹೆಸರಿನಲ್ಲಿ ಹಣ ಪಡೆದು ಹಲವರಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ ವಂಚಕನನ್ನು ಬೆಂಗಳೂರಿನ  ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮಾಜಿ ಪಿಡಿಒ ಯೋಗೇಂದ್ರ ಎಂಬಾತ ಬೆಂಗಳೂರಿನ ಏರ್‌ಪೋರ್ಟ್‌ಗೆ ಬಂದಿಳಿಯುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ. ಯಲ್ಲಾಪುರದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಯೋಗೇಂದ್ರ 2020ರಲ್ಲಿ ಕರ್ತವ್ಯದಿಂದ ವಜಾಗೊಂಡಿದ್ದ. 2023ರಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಂದ 17 ಲಕ್ಷ ರೂ. ಪಡೆದು ಪರಾರಿಯಾಗಿದ್ದ ಆರೋಪದ ಮೇಲೆ ಯೋಗೇಂದ್ರ ವಿರುದ್ಧ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹಣ ಡಬಲ್ ಮಾಡಿಕೊಡುವುದಾಗಿ ವ್ಯಕ್ತಿಯೊಬ್ಬರಿಂದ 1.35 ಕೋಟಿ ರೂ. ಪಡೆದು ವಂಚಿಸಿದ್ದ ಆರೋಪದ ಮೇಲೆ ಯೋಗೇಂದ್ರ ವಿರುದ್ಧ 2024ರಲ್ಲಿ ವಿ.ವಿ.ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಆತ ಶ್ರೀಲಂಕಾ, ದುಬೈಗೆ ತೆರಳಿ ತಲೆಮರೆಸಿಕೊಂಡಿದ್ದ. ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರು ಆತ ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆ ಬಂಧಿಸಿದ್ದಾರೆ.

ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿಕೊಂಡು ಅವರ ಬಳಿ ತನಗೆ ರಾಜಕಾರಣಿಗಳ ಪರಿಚಯವಿದೆ, ಪ್ರಭಾವಿ ವ್ಯಕ್ತಿಗಳು ನನಗೆ ಗೊತ್ತು ಎಂದು ಆಮಿಷವೊಡ್ಡಿ ಹಣ ಪಡೆದು ವಂಚಿಸುತ್ತಿದ್ದ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *